ಬೆಂಗಳೂರು: ಕರ್ನಾಟಕದಲ್ಲಿ ಶಾಂತಿಯುತ ಮತದಾನ ನಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಚುನಾವಣಾ ಅಕ್ರಮ ನಡೆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜಿವ್ ಕುಮಾರ್, ಹಣ ಹಾಗೂ ಇತರೆ ಆಮಿಷಗಳಿಗೆ ಮತದಾರರು ಒಳಗಾಗಬಾರದು. ಚುನಾವಣಾ ಅಕ್ರಮ ತಡೆಯಲು ಹದ್ದಿನ ಕಣ್ಣಿಡಲಾಗುವುದು. ಪ್ರತಿ ಬ್ಯಾಂಕ್ ವ್ಯವಹಾರದ ಮೇಲೂ ಗಮನ ವಹಿಸುತ್ತೇವೆ. ಗಡಿ, ಕರಾವಳಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು.
ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಸುವಿಧಾ ಮೂಲಕ ನಾಮಪತ್ರ ಸಲ್ಲಿಸಬಹುದು. ಅಫಿಡವಿಟ್ ಕೂಡ ಸಲ್ಲಿಕೆ ಮಾಡಬಹುದು. ಅಪರಾಧ ಪ್ರಕರಣಗಳಿದ್ದರೆ ಮೂರು ಬೇರೆ ಬೇರೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಆನ್ ಲೈನ್ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೇಪರ್ ಕಟ್ಟಿಂಗ್ ಕೂಡ ಅಪ್ ಲೋಡ್ ಮಾಡಬೇಕು. ಸಭೆ, ಸಮಾರಂಭ ಮಾದಲು ಕೂಡ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.