ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇದರ ಮಧ್ಯೆ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆ ರಾಜ್ಯಕ್ಕೆ ಕಾಲಿಟ್ಟಿದೆ. ಇದು ಚುನಾವಣೆಗೆ ಪೂರ್ವ ತಯಾರಿ ಎನ್ನಲಾಗುತ್ತಿದ್ದು ಇದರ ಮಧ್ಯೆ ಆಡಳಿತಾರೂಢ ಬಿಜೆಪಿ ಕೂಡ ಚುನಾವಣೆಗೆ ಸಿದ್ಧತೆ ನಡೆಸಲು ಮುಂದಾಗಿದೆ.
ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದಸರಾ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ತಾವು ಪಕ್ಷದ ನಾಯಕರ ಜೊತೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಸದ್ಯದಲ್ಲೇ ನವ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾತುಕತೆ ನಡೆಸುತ್ತೇನೆ. ಅವರ ಒಪ್ಪಿಗೆ ಸಿಕ್ಕ ಬಳಿಕ ಸಂಪುಟ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕುರಿತಂತೆ ಮಾತನಾಡಿದ ಅವರು, ಅದು ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಎಂದು ವ್ಯಂಗ್ಯವಾಡಿದರು.