ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ವಿಧಾನಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿದರು.
ಕಳೆದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ವಿಧಾನಪರಿಷತ್ ನಲ್ಲಿ ಮಂಡನೆಯಾಗಿರಲಿಲ್ಲ ಎಂದ ಗೃಹ ಸಚಿವರು, ಪರಿಷತ್ ನಲ್ಲಿ ವಿಧೇಯಕ ಮಂಡಿಸಿದರು.
ಮತಾಂತರವಾಗಲು ಎಲ್ಲರಿಗೂ ಅವಕಾಶವಿದೆ. ಆದರೆ ಬಲವಂತದ ಮತಾಂತರ, ಒತ್ತಡದಿಂದಾಗಿ ಮತಾಂತರವಾಗಬಾರದು. ಇಂತಹ ಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಎಂದರು.
ಮತಾಂತರದಿಂದಾಗಿ ಊರುಗಳೇ ಒಡೆದು ಹೋಗಿವೆ. ಇತ್ತೀಚೆಗೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸ್ವತಃ ಶಾಸಕರೇ ಈ ಬಗ್ಗೆ ವಿಧಾನಸಭೆಯಲ್ಲಿ ತಮ್ಮ ತಾಯಿಗಾದ ಅನುಭವವನ್ನು ಹೇಳಿದ್ದರು. ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕಿನಲ್ಲಿ ಬದುಕುವ ಅವಕಾಶವಿದೆ. ಆದರೆ ಬಲವಂತದ ಮತಾಂತರ, ಆಮಿಷ, ಒತ್ತಾಯಪೂರ್ವಕವಾಗಿ ಮತಾಂತರಕ್ಕೆ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ಹೇಳಿದರು.
ಮತಾಂತರ ಬಯಸುವ ವ್ಯಕ್ತಿ ಸ್ವಇಚ್ಛೆಯಿಂದ ಆಗಬೇಕು ಹಾಗೂ 60 ದಿನಗಳ ಮೊದಲು ಅರ್ಜಿ ತುಂಬಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ಕೊಡಬೇಕು. ಮತಾಂತರ ಮಾಡಿಸುವ ವ್ಯಕ್ತಿಯೂ ಅರ್ಜಿ ತುಂಬಬೇಕು. ಮತಾಂತರದ ಬಗ್ಗೆ ತಕಾರರು ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಂದಾಯ, ಸಮಾಜಕಲ್ಯಾಣ ಇಲಾಖೆಗೆ ಮಾಹಿತಿ ನೀಡಬಹುದು ಸೇರಿದಂತೆ ಹಲವು ಅಂಶಗಳನ್ನು ವಿವರಿಸಿದರು.