ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದರು. ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದರು. ಬಿಜೆಪಿಯವರು ಟೀಕಿಸುತ್ತಾ ಅಲ್ಲೇ ಇರಲಿ ನಾವು ಜನರಿಗೆ ನೀಡಿದ ಗ್ಯಾರಂಟಿ ಅನುಷ್ಠಾನಕ್ಕೆ ತಂದು ಮುಂದೆ ಸಾಗುತ್ತೇವೆ ಎಂದರು.
ಇದೇ ವೇಳೆ ವಿದ್ಯುತ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವಿದ್ಯುತ್ ದರ ಏರಿಕೆ ಮಾಡಿದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ವಿದ್ಯುತ್ ದರ ಏರಿಸಿದ್ದು ನಾವಲ್ಲ ಎಂದು ಸಷ್ಟನೆ ನೀಡಿದರು.
ಮೇ 12ರಿಂದ ವಿದ್ಯುತ್ ದರ ಏರಿಕೆ ಎಂದು ಏಪ್ರಿಲ್ ನಲ್ಲಿಯೇ ತೀರ್ಮಾನವಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಾರಿಗೆ ಬಂದಿರಲಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೇ ವಿದ್ಯುತ್ ದರ ಏರಿಕೆ ತೀರ್ಮಾನಿಸಲಾಗಿದೆ ಹೊರತು ನಮ್ಮ ಸರ್ಕಾರ ಮಾಡಿದ್ದಲ್ಲ ಎಂದು ಹೇಳಿದರು.