ರಾಯಭಾಗ: ಸತೀಶ ಜಾರಕಿಹೊಳಿ ಆಧಾರ ರಹಿತವಾಗಿ ಮಾತನಾಡಿ ಧರ್ಮಕ್ಕೆ ಅಪಮಾನ ಮಾಡುತ್ತಿದ್ದಾನೆ. ಆ ಪುಣ್ಯಾತ್ಮ ಎಲ್ಲಿಂದ ಇಂತಹ ಪದ ತಂದು ಹೇಳ್ತಿದ್ದಾನೋ ಗೊತ್ತಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂದು ಹೇಳಿದ್ದಾನೆ. ವಿಕೃತ ಮನಸ್ಸಿನವರು ಬರೆದಿದ್ದನ್ನು ಆಧಾರವಾಗಿಟ್ಟುಕೊಂಡು ಮಾತಾಡ್ತಾನೆ. ಹಿಂದೂ ಎಂದರೆ ಬಹಳ ಹೊಲಸು ಎಂದು ಹೇಳ್ತಾನೆ. ಬದುಕು ಕಟ್ಟಿಕೊಟ್ಟ ಧರ್ಮ ಕೆಟ್ಟದ್ದು ಅಂತಾನೆ. ಮಾತಾಡೋದು ಮಾತಾಡಿ ಮತ್ತೆ ಚರ್ಚೆಗೆ ಕರೀತಾನೆ. ಕಾಂಗ್ರೆಸ್ ಗೆ ಕೆಟ್ಟಕಾಲ ಬಂದಿದೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಒಂದು ನೂರು ವರ್ಷ ಹಳೇ ಪಕ್ಷ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವಂತೆ ನಡೆದುಕೊಂಡಿದೆ. ಭಾರತವನ್ನು ಗೊಂದಲದಲ್ಲಿಟ್ಟು ಆಳಬೇಕು ಎಂಬುದು ಇವರ ಮೂಲ ಸಿದ್ಧಾಂತ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗ್ತಾರೆ. ಇನ್ನೊಂದೆಡೆ ಈ ರೀತಿ ಹೇಳಿಕೆಗಳು ಬಂದಾಗ ಮೌನವಾಗಿ ಇರ್ತಾರೆ. ಸತೀಶ್ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಅವರ ಅಭಿಪ್ರಾಯವೇನು ? ಮೊದಲು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಗೆ ಬದ್ಧತೆ ಇದ್ದರೆ ಮೊದಲು ಸತೀಶ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ವಿಕಿಪೀಡಿಯಾದಲ್ಲಿ ಇದ್ದುದನ್ನು ಹೇಳಿದ್ದೇನೆ ಎಂದು ಹೇಳ್ತಾರೆ. ವಿಕಿಪೀಡಿಯಾ ಎಷ್ಟರಮಟ್ಟಿಗೆ ವಿಶ್ವಾಸಾರ್ಹ ಎಂಬುದು ಗೊತ್ತಿದೆ. ಇಂಟರ್ ನೆಟ್ ನಲ್ಲಿ ಹತ್ತು ಹಲವಾರು ಲೇಖನಗಳು ಇರುತ್ತವೆ. ಸಾರ್ವಜನಿಕ ಜೀವನದಲ್ಲಿ ನಾವು ಅರಿವಿನಿಂದ ಮಾತನಾಡಬೇಕು, ನಡೆಯಬೇಕು ಎಂಬ ಜ್ಞಾನ ಬೇಡವೇ ? ಯಾವ ಪುರಾವೆ ಆಧಾರದ ಮೇಲೆ ಮಾತನಾಡಿದ್ದಾರೆ ಸ್ಪಷ್ಟಪಡಿಸಲಿ. ಆ ಪುರಾವೇಗಳೇ ಸಾಕ್ಷಿಯಾಗುತ್ತವೆ. ಅವರ ಆಧಾರಗಳೇ ಅತ್ಯಂತ ಅಸಂಗತ್ಯವಾದ ಆಧಾರ ಇನ್ನು ಚರ್ಚೆಗೆ ಬೇರೆ ಕರೆಯುತ್ತಾರೆ ಎಂದು ಗುಡುಗಿದರು.