ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆ ನಷ್ಟ, ಮನೆ ಕುಸಿತ ಮೊದಲಾದ ಘಟನೆಗಳು ಸಂಭವಿಸಿದ್ದರೆ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಜೊತೆಗೆ ಅವೈಜ್ಞಾನಿಕ ಕಾಮಗಾರಿಗಳಿಂದ ಮನೆಗಳಿಗೆ ನೀರು ನುಗ್ಗುತ್ತಿದೆ.
ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಜನರು ಮಳೆಯಿಂದ ಹೈರಾಣಾಗಿ ಹೋಗಿದ್ದಾರೆ. ಬಡಾವಣೆಗಳಲ್ಲಿ ನೀರು ತುಂಬಿಕೊಂಡಿದ್ದು ಪ್ರಮುಖ ರಸ್ತೆಗಳೂ ಸಹ ಕೆರೆಯಂತಾಗಿದೆ. ಅದರಲ್ಲೂ ಸಂಚಾರದ ವೇಳೆ ಮಳೆ ಬಂದರೆ ವಾಹನ ಸವಾರರು ರಕ್ಷಣೆಗಾಗಿ ಅಂಡರ್ ಪಾಸ್ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಾರೆ.
ಇದೀಗ ಈ ಕುರಿತಂತೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಮಹತ್ವದ ಹೇಳಿಕೆ ನೀಡಿದ್ದಾರೆ. ಮಳೆಯಾಗುವ ಸಂದರ್ಭದಲ್ಲಿ ಅಂಡರ್ ಪಾಸ್ ಕೆಳಗಡೆ ವಾಹನಗಳನ್ನು ಯಾರೂ ನಿಲ್ಲಿಸಬೇಡಿ ಇದರಿಂದ ಅಪಘಾತಗಳಾಗುತ್ತಿವೆ. ಈಗಾಗಲೇ 3-4 ಅಪಘಾತದ ಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ಅಂಡರ್ ಪಾಸ್ ಕೆಳಗಡೆ ವಾಹನ ನಿಲ್ಲಿಸಿದರೆ ಅಂತವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.