ವಾಹನಗಳಲ್ಲಿ ಲೌಡ್ ಸ್ಪೀಕರ್, ವೂಫರ್, ಡಿಜೆ ಲೈಟ್, ಚಿತ್ರ-ವಿಚಿತ್ರ ಶಬ್ದದ ಹಾರ್ನ್ ಬಳಕೆ ಕುರಿತಂತೆ ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇವುಗಳ ಬಳಕೆಯಿಂದ ರಸ್ತೆಯಲ್ಲಿನ ಇತರೆ ಪ್ರಯಾಣಿಕರು, ವಾಹನಗಳ ಚಾಲಕರ ಏಕಾಗ್ರತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಸಂಬಂಧ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬೂಸ್ಟರ್ ಆಂಪ್ಲಿಫೈಯರ್, ವೂಫರ್ ಬಳಕೆಯು ಶಬ್ದ ಮಾಲಿನ್ಯ ತಡೆ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದೆ.
ಹೀಗಾಗಿ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು, ಇವುಗಳನ್ನು ಅಳವಡಿಸಿಕೊಂಡು ಸಂಚಾರ ಮಾಡುವ ವಾಹನ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಫಿಟ್ನೆಸ್ ಪ್ರಮಾಣಪತ್ರವನ್ನು ರದ್ದುಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.