ಬೆಳಗಾವಿ: ನಾಳೆ ನಡೆಯಲಿರುವ ವಿಧಾನ ಪರಿಷತ್ ವಾಯುವ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವು ರಂಗೇರಿದ್ದು, ಇಲ್ಲಿಯೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕಸರತ್ತು ನಡೆಸಿದ್ದು, ಆಮಿಷವೊಡ್ದಿದ್ದಾರೆ.
ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಯಿಂದ ಎಣ್ಣೆ ಪಾರ್ಟಿ ಆಮಿಷವೊಡ್ಡಲಾಗಿದೆ. ಅದೂ ಕೂಡ ಕಾಂಗ್ರೆಸ್ ಕಚೇರಿಯಲ್ಲಿಯೇ ಭರ್ಜರಿ ಡ್ರಿಂಕ್ಸ್ ಪಾರ್ಟಿ ನಡೆದಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ಕಚೇರಿ ಬೋರ್ಡ್ ಗೆ ಬಟ್ಟೆ ಕವರ್ ಮಾಡಿ ಎಣ್ಣೆ ಪಾರ್ಟಿ ನಡೆದಿದೆ. ನೂರಾರು ಶಿಕ್ಷಕರನ್ನು ಕಚೇರಿಗೆ ಕರೆಸಿ ಮದ್ಯದ ವ್ಯವಸ್ಥೆ ಮಾಡಲಾಗಿದೆ.
ಉಪ ವಿಭಾಗಾಧಿಕಾರಿ ಕಚೇರಿ ಪಕ್ಕದಲ್ಲಿಯೇ ಬ್ಲಾಕ್ ಕಾಂಗ್ರೆಸ್ ಕಚೇರಿ ಇದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಭ್ಯರ್ಥಿ ಪಾರ್ಟಿ ಆಯೋಜಿಸಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ.