ವಾಯು ಮಾಲಿನ್ಯ ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಪತ್ತೆ ಮಾಡಲು ವಿಶೇಷ ಅಪ್ಲಿಕೇಶನ್ ಒಂದನ್ನು ತಜ್ಞರು ಅಭಿವೃದ್ಧಿಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಕ್ಲೀನ್ ಏರ್ ಶೃಂಗಸಭೆಯಲ್ಲಿ ಈ ಕುರಿತಂತೆ ತಜ್ಞರು ಮಾಹಿತಿ ನೀಡಿದ್ರು. ಆರೋಗ್ಯ ಸಮಸ್ಯೆಗಳು ಹಾಗೂ ವಾಯುಮಾಲಿನ್ಯಕ್ಕೆ ಇರುವ ಸಂಬಂಧವನ್ನು ಅಳೆಯುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಳೆದ 5 ವರ್ಷಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಾರ್ಡಿಯಾಕ್ ಸಮಸ್ಯೆಗಳನ್ನು ಹೊಂದಿರುವವರ ಪೈಕಿ ಶೇ.30ರಷ್ಟು ಮಂದಿ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು. ಬಹುಶಃ ಅವರ ಆರೋಗ್ಯದ ಮೇಲೆ ವಾಯುಮಾಲಿನ್ಯದಿಂದ ಆಗುತ್ತಿರುವ ಪರಿಣಾಮ ಇದು. ಹಾಗಾಗಿ ದೈಹಿಕ ಚಟುವಟಿಕೆಗಳ ಕೊರತೆ, ಡಯಟ್ ಸಮಯ ಮತ್ತು ವಾಯುಮಾಲಿನ್ಯದ ಪರಿಣಾಮಗಳನ್ನು ಅಳೆಯಲು ವಿಶೇಷ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದ್ದೇವೆ ಅಂತಾ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತಜ್ಞ ಡಾ.ರಾಹುಲ್ ಪಾಟೀಲ್ ಹೇಳಿದ್ದಾರೆ.
ವಾಯುಮಾಲಿನ್ಯದ ಕುರಿತಂತೆ ಅಂಕಿ-ಅಂಶಗಳ ಕೊರತೆ ಇರುವುದರಿಂದ ಅದರಿಂದ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ಅಳೆಯಲು ಸಾಧ್ಯವಾಗುತ್ತಿಲ್ಲ ಎಂದು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ವಾಯುಮಾಲಿನ್ಯದಿಂದ ಉಂಟಾಗುವ ದೀರ್ಘ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆಯೆಂದು ಹೇಳಿದ್ದಾರೆ.