ಜುಲೈ 5 ರಂದು ಹುಬ್ಬಳ್ಳಿಯ ‘ದಿ ಪ್ರೆಸಿಡೆಂಟ್’ ಹೋಟೆಲ್ ನಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನು ದರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಹತ್ಯೆ ನಡೆದ ಕೇವಲ ನಾಲ್ಕು ಗಂಟೆಯೊಳಗಾಗಿ ಪೊಲೀಸರು ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಇವರಿಬ್ಬರ ಜೊತೆಗೆ ಇನ್ನೂ ಹಲವರು ಈ ಹತ್ಯೆಯಲ್ಲಿ ಶಾಮೀಲಾಗಿರಬಹುದೆಂಬ ಶಂಕೆಯಲ್ಲಿ ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆದಿದ್ದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದು, ಇಂದು ಆರೋಪಿಗಳ ಕಸ್ಟಡಿ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ನಾಳೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಇದರ ಮಧ್ಯೆ ಪೊಲೀಸ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದೆ ಎಂದು ಹೇಳಲಾಗಿದೆ.
ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಕಳೆದುಕೊಂಡ ಬಳಿಕ ಚಂದ್ರಶೇಖರ ಗುರೂಜಿ ವಿರುದ್ಧ ಹಗೆ ಸಾಧಿಸುತ್ತಿದ್ದ ಇವರುಗಳು ವಾಟ್ಸಾಪ್ ಗ್ರೂಪ್ ರಚಿಸಿ ಅದಕ್ಕೆ ‘ಸಿಜಿ ಪರಿವಾರ ಮೋಸ ಹೋದವರ ಸಂಘ’ ಎಂದು ನಾಮಕರಣ ಮಾಡಿದ್ದರಂತೆ. ಈ ವಾಟ್ಸಾಪ್ ಗ್ರೂಪಿಗೆ ಮಹಾಂತೇಶ ಕೂಡ ಅಡ್ಮಿನ್ ಎಂದು ಹೇಳಲಾಗಿದೆ. ಈ ವಾಟ್ಸಪ್ ಗ್ರೂಪ್ ನಲ್ಲಿ ಹಲವು ಬಾರಿ ಚಂದ್ರಶೇಖರ ಗುರೂಜಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರಂತೆ.
ಹತ್ಯೆ ಮಾಡುವ ಹಿಂದಿನ ದಿನವೂ ಚಂದ್ರಶೇಖರ ಗುರೂಜಿ ಅವರನ್ನು ಭೇಟಿಯಾಗಿದ್ದ ಆರೋಪಿಗಳು ಅವರೊಡನೆ ವಾಗ್ವಾದ ನಡೆಸಿದ್ದರಂತೆ. ಇಷ್ಟಾದರೂ ಕೂಡ ಗುರೂಜಿಯವರು ಇವರ ಭೇಟಿ ವೇಳೆ ಯಾವುದೇ ಭದ್ರತೆ ಪಡೆಯದೆ ಹೋದ ಕಾರಣ ಬರ್ಬರವಾಗಿ ಹತ್ಯೆಯಾಗುವಂತಾಯಿತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.