ಚಾಮರಾಜನಗರ: ಸಚಿವ ಸಂಪುಟ ರಚನೆಯಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು ಬಿಡಬೇಕು ಎಂಬುದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಹೈಕಮಾಂಡ್ ಗೆ ಬಿಟ್ಟ ನಿರ್ಧಾರ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಸಚಿವ ಸಂಪುಟ ರಚನೆಗಾಗಿ ನಾನು ಯಾವುದೇ ಸಲಹೆಗಳನ್ನು ಕೊಡಲ್ಲ. ಬಿಜೆಪಿಗೆ ಬಂದ 17 ಶಾಸಕರ ಬಗ್ಗೆಯೂ ನಾನು ಈಗ ಏನೂ ಹೇಳುವುದೂ ಇಲ್ಲ. ಅವರಿಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂಗೆ ಬಿಟ್ಟ ನಿರ್ಧಾರ. ಸಂಪುಟ ರಚನೆಯಲ್ಲಿ ಬೊಮ್ಮಾಯಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಹಾಗಾಗಿ ಹೈಕಮಾಂಡ್ ಹಾಗೂ ಸಿಎಂ ಸೇರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಒಂದೇ ವ್ಯಕ್ತಿಗೆ ಸಿಗಲಿದೆ ಕೊರೊನಾದ ಎರಡು ಭಿನ್ನ ಲಸಿಕೆ…..!
ಇನ್ನು ರಾಜ್ಯಾದ್ಯಂತ ನಾನು ಪ್ರವಾಸಗಳನ್ನು ಕೈಗೊಂಡು ಪಕ್ಷ ಬಲಪಡಿಸುತ್ತೇನೆ. ಗಣೇಶ ಚತುರ್ಥಿ ಬಳಿಕ ವಾರಕ್ಕೊಂದು ಜಿಲ್ಲೆಗೆ ತೆರಳಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ಯತ್ನಿಸುತ್ತೇನೆ. ನನ್ನ ಕಣ್ಣೆದುರೇ ಯೋಗ್ಯ ವ್ಯಕ್ತಿಯನ್ನು ಬೆಳೆಸಬೇಕು ಎಂಬುದು ಉದ್ದೇಶ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾರಿಗೆ ಇದು ನಾನು ನೀಡಿರುವ ಭರವಸೆ ಎಂದು ಹೇಳಿದರು.