ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ನಾನು ಯಾವತ್ತೂ ಮತ್ತೆ ಸಚಿವನಾಗುವ ಆಸೆ ವ್ಯಕ್ತಪಡಿಸಿಯೇ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಒಂದು ವರ್ಷದ ಹಿಂದೆ ಸಚಿವ ಸಂಪುಟ ವಿಸ್ತರಣೆ ಆಗಿದ್ದರೆ ಅರ್ಥವಿರೋದು. ಎಲ್ಲರೂ ಈಗ 2023ರ ವಿಧಾನಸಭಾ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸರ್ಕಾರ ಏನು ತೀರ್ಮಾನ ಮಾಡುತ್ತೆ ನೋಡೋಣ. ಸಚಿವನಾಗುವ ಆಸೆಯಿಲ್ಲ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅಷ್ಟೇ ಎಂದು ಹೇಳಿದರು.
ಬಿಜೆಪಿಯಲ್ಲಿ ಹಿರಿಯರ ಮೂಲೆ ಗುಂಪು ಮಾಡಲಾಗುತ್ತಿದೆಯೇ ಎಂಬ ವಿಚಾರವಾಗಿ ಈ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದು ಹೇಳಿದರು. ಇದೇ ವೇಳೆ ಕುಟುಂಬ ರಾಜಕಾರಣವನ್ನು ವಿರೋಧಿಸಿದ ಸಿ.ಪಿ.ಯೋಗೇಶ್ವರ್, ಹಿಂದೆ ರಾಜ ಮನೆತನವನ್ನು ನೋಡಿದ್ವಿ. ತಾತ, ಮಕ್ಕಳು, ಮೊಮ್ಮಕ್ಕಳು ಅಂತಾ. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇದು ಮುಂದುವರೆಯುವುದು ಅಣಕ. ಇದು ಬೇಸರದ ವಿಚಾರ. ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.