ಬೆಂಗಳೂರು: ಪಿಎಸ್ಐ, ಸಹಾಯಕ ಪ್ರಾಧ್ಯಾಪಕರು, ಕೆಪಿಟಿಸಿಎಲ್ ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ ಪ್ರಧಾನಿ ಮೋದಿಯವರೇ? ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದೀರಿ, ಆದರೆ ಇಲ್ಲಿ “2 ಕೋಟಿಗೆ ಒಂದು ಉದ್ಯೋಗ” ಎಂಬಂತಾಗಿದೆ. ನಿಮ್ಮ ಟ್ರಬಲ್ ಎಂಜಿನ್ ಸರ್ಕಾರದ ಹುದ್ದೆ ಮಾರಾಟದ ಬಗ್ಗೆ ಮಾತನಾಡುವಿರಾ ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ. ಪ್ರಧಾನಿ ಅವರೇ, ಒಮ್ಮೆಯೂ ನೆರೆ ವೀಕ್ಷಣೆಗೆ ತಾವು ಬರಲಿಲ್ಲ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,500 ಕೋಟಿ ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ. ಕನ್ನಡಿಗರನ್ನು ಅನಾಥರನ್ನಾಗಿಸಿದೆ ನಿಮ್ಮ ಸರ್ಕಾರ. ಟ್ರಬಲ್ ಎಂಜಿನ್ ಸರ್ಕಾರದ ಕಿರುಕುಳದ ಬಗ್ಗೆ ಗುತ್ತಿದೆದಾರ ಸಂತೋಷ್ ಪಾಟೀಲ್ ಪತ್ರಕ್ಕೆ ತಾವು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಜೀವ ಹೋಯ್ತು. ಗುತ್ತಿಗೆದಾರರು ಭ್ರಷ್ಟ ಸರ್ಕಾರದ 40% ಲೂಟಿಯ ಬಗ್ಗೆ 2 ಬಾರಿ ನಿಮಗೆ ಪತ್ರ ಬರೆದಿದ್ದಾರೆ, ಅವರಿಗೆ ಉತ್ತರ ನೀಡುವಿರಾ ? ಅವರ ಸಮಸ್ಯೆಗೆ ಪರಿಹಾರ ತಂದಿದ್ದೀರಾ ? ಎಂದು ಸರಣಿ ಪ್ರಶ್ನೆ ಮಾಡಿದೆ.
ನಿಮ್ಮ ಮೇಲಿನ ಭರವಸೆಯಿಂದ ಹಿಂದೆ ನಳೀನ್ ಕುಮಾರ್ ಕಟೀಲ್ ಅವರು ಒಂದು ಡಾಲರ್ಗೆ 15 ರೂಪಾಯಿಯಾಗುತ್ತದೆ ಎಂದಿದ್ದರು, ಈಗ 83 ರೂಪಾಯಿಯಾಗಿದೆ. ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ, ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ ! ಅವರಿಗೆ ಸಾಂತ್ವಾನ ಹೇಳುವಿರಾ?!
ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು. ತಮ್ಮ ಕಚೇರಿ ಕೇಳಿದ ವರದಿ ತಲುಪಿತೇ? ಟ್ರಬಲ್ ಎಂಜಿನ್ ಸರ್ಕಾರದ ಭ್ರಷ್ಟಾಚಾರದ ದರ್ಶನವಾಯಿತೇ? ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡಿ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.