
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ‘ವರ್ಕ್ ಫ್ರಂ ಹೋಂ’ ಗೆ ಅವಕಾಶ ನೀಡಿದ್ದ ಐಟಿ ಕಂಪನಿಗಳು ಇದೀಗ ಕೋವಿಡ್ ಕಮ್ಮಿಯಾಗುತ್ತಿದ್ದಂತೆ ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸುತ್ತಿವೆ. ಈಗಾಗಲೇ ಬಹಳಷ್ಟು ಕಂಪನಿಗಳು ಈ ಹಾದಿ ಹಿಡಿದಿದ್ದು, ಇದೀಗ ಟಿಸಿಎಸ್ ‘ವರ್ಕ್ ಫ್ರಂ ಹೋಂ’ ನಲ್ಲಿ ಮುಂದುವರೆಯಲು ಬಯಸುವ ತನ್ನ ಉದ್ಯೋಗಿಗಳು ಮೆಡಿಕಲ್ ಸರ್ಟಿಫಿಕೇಟ್ ಒದಗಿಸುವಂತೆ ಹೇಳಿದೆ.
ವೈದ್ಯಕೀಯ ಕಾರಣಗಳಿಗಾಗಿ ಕಚೇರಿಗೆ ಬಂದು ಕೆಲಸ ಮಾಡಲು ಸಾಧ್ಯವಾಗದ ಉದ್ಯೋಗಿಗಳು, ಕಂಪನಿಯ ವೈದ್ಯರಿಂದ ಈ ಕುರಿತು ಸರ್ಟಿಫಿಕೇಟ್ ತರಬೇಕಿದೆ. ಉಳಿದಂತೆ ಇತರೆ ಉದ್ಯೋಗಿಗಳು ಕಚೇರಿಗೆ ಹಾಜರಾಗುವುದು ಅನಿವಾರ್ಯವಾಗಲಿದೆ. ಈ ರೀತಿ ಮೆಡಿಕಲ್ ಸರ್ಟಿಫಿಕೇಟ್ ನೀಡಿದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗುತ್ತಾದರೂ ಅಗತ್ಯವಿದ್ದ ಸಂದರ್ಭದಲ್ಲಿ ಕಚೇರಿಗೆ ಹಾಜರಾಗಬೇಕಾಗುತ್ತದೆ.
ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನ ಮೂರನೇ ಒಂದು ಭಾಗದಷ್ಟು ಅಂದರೆ 6,16,171 ಉದ್ಯೋಗಿಗಳು ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಡಿಸೆಂಬರ್ ವೇಳೆಗೆ ಮೆಡಿಕಲ್ ಸರ್ಟಿಫಿಕೇಟ್ ನೀಡಿದವರನ್ನು ಹೊರತುಪಡಿಸಿ ಇತರೆ ಉದ್ಯೋಗಿಗಳು ಕಚೇರಿಗೆ ಹಾಜರಾಗುವ ಸಾಧ್ಯತೆ ಇದೆ. ಕಂಪನಿಯ ಶೇಕಡ 70 ಉದ್ಯೋಗಿಗಳಿಗೆ ಶೇಕಡ 100 ವೇತನ ಪಾವತಿಸಲಾಗಿದ್ದು, ಇನ್ನುಳಿದ ಶೇಕಡ 30 ಮಂದಿಗೆ ಅವರ ಕಾರ್ಯ ನಿರ್ವಹಣೆ ಆಧರಿಸಿ ವೇತನ ನೀಡಲಾಗಿದೆ.