ಶಿವಮೊಗ್ಗ : ಸರ್ಕಾರಿ ಕಾಮಗಾರಿಗಳ ಗುತ್ತಿಗೆ ವ್ಯವಹಾರಕ್ಕೆ ಶೇ.40 ರಷ್ಟು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎನ್ನುವ ವಿಚಾರ ಭಾರೀ ವಿವಾದ ಸೃಷ್ಟಿಸಿರುವುದರ ಬೆನ್ನಲೇ ಟೆಂಡರ್ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರುವುದರ ಜತೆಗೆ ಕಮಿಷನ್ ವ್ಯವಹಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, 50 ಕೋಟಿ ರೂ. ಗಳಿಗಿಂತ ಹೆಚ್ಚಿನ ಕಾಮಗಾರಿಗಳಿಗೆ ಇನ್ನು ಅನುಮೋದನೆ ನೀಡುವಾಗ ಅದರ ಪ್ರಕ್ರಿಯೆಗಳ ಮೇಲೆ ನಿಗಾ ಇರಿಸಲು ಕೆಟಿಪಿಪಿ(ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆ) ಕಾಯ್ದೆಯಡಿ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಿದೆ.
ಇದೇ ವೇಳೆ, ನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಇನ್ನು ಮುಂದೆ ಮೌಖಿಕ ಆದೇಶ ಮೇಲೆ ಕಾಮಗಾರಿ ನಡೆಸಲು ಅವಕಾಶ ಕೊಟ್ಟರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ನಗರದ ‘ಹರ್ಷ ದಿ ಫರ್ನ್’ ಹೋಟೆಲ್ ನಲ್ಲಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಕಮಿಷನ್ ವ್ಯವಹಾರ ಎನ್ನುವುದು ಅಘೋಷಿತ ಒಪ್ಪಿತವೇ ಎನ್ನುವಂತಾಗಿರುವಾಗ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಈ ವಿಷಯ ತಿಳಿಸಿದರು.
ಸರ್ಕಾರದ ಮೇಲೆ ಕಮಿಷನ್ ಆರೋಪ ಬಂದಿದ್ದರೂ, ಯಾರು ಕೂಡ ಇದುವರೆಗೂ ದಾಖಲೆ ಕೊಟ್ಟಿಲ್ಲ. ದಾಖಲೆ ಕೊಟ್ಟರೆ ನಾವು ಯಾವುದೇ ತನಿಖೆ ನಡೆಸುವುದಕ್ಕೂ ಸಿದ್ದರಿದ್ದೇವೆ. ಇನ್ನು ಆ ಬಗ್ಗೆ ನಾನು ಹೆಚ್ಚು ವಿವರಕ್ಕೆ ಹೋಗುವುದಿಲ್ಲ. ಆದರೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿನ ಕಮಿಷನ್ ವ್ಯವಹಾರಕ್ಕೆ ನಿಯಂತ್ರಣ ಹಾಕಬೇಕೆನ್ನುವ ಉದ್ದೇಶದೊಂದಿಗೆ ಕೆಟಿಪಿಪಿ ಕಾಯ್ದೆಯಡಿ ಓರ್ವ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಮಿತಿ ರಚಿಸಲು ನಿರ್ಧರಿಸಿದೆ. 50 ಕೋಟಿ. ರೂ ಮೇಲ್ಪಟ್ಟ ಯಾವುದೇ ಕಾಮಗಾರಿಗೆ ಅನುಮೋದನೆ ನೀಡುವಾಗ ಅದು ಈ ಸಮಿತಿಯ ಮುಂದೆ ಬರಲಿದೆ. ಸಮಿತಿಯ ಪರಿಶೀಲನೆಯ ನಂತರವೇ ಕಾಮಗಾರಿಗೆ ಅನುಮೋದನೆ ಸಿಗಲಿದೆ ಎಂದರು.
ಸಮಿತಿಯೂ ಕೂಡ ಕಮಿಷನ್ ವ್ಯವಹಾರಕ್ಕೆ ಸಿಲುಕಿದರೆ ಕಾಮಗಾರಿಗಳ ಕಥೆಯೇನು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲವನ್ನು ನಾವು ಹೀಗೆಯೇ ಪ್ರಶ್ನಿಸುತ್ತಾ ಹೊರಟರೆ ಯಾವುದಕ್ಕೂ ಕೊನೆ ಇಲ್ಲ. ಆದರೆ ಕೊನೆ ಪಕ್ಷ ಈಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಆರೋಪಗಳಾದರೂ ನಿಲ್ಲಬೇಕಾದರೆ ಇರುವ ವ್ಯವಸ್ಥೆಯಲ್ಲಿ ಒಂದಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಲಾಗುತ್ತದೆ. ಆ ನಿಟ್ಟಿನಲ್ಲಿ ನಮಗೆ ಆಗುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ವರ್ಕ್ ಆರ್ಡರ್ ಇಲ್ಲದೆಯೂ ನಡೆಯುವ ಕೆಲಸಗಳ ಬಗ್ಗೆ ಸುದ್ದಿಗಾರರ ಗಮನ ಸೆಳೆದಾಗ, ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಇನ್ನು ಮುಂದೆ ಮೌಖಿಕ ಆದೇಶ ಮೇಲೆ ಕಾಮಗಾರಿ ನಡೆಸಲು ಅವಕಾಶ ಕೊಟ್ಟರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಲು ಈಗಷ್ಟೇ ನಾನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.