
ಉಡುಪಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅದರಲ್ಲಿಯೂ ಕರಾವಳಿ, ಮಲೆನಾಡು ಭಾಗಗಳಲ್ಲಿ ವರುಣ ಆರ್ಭಟಿಸಿ ಬೊಬ್ಬಿರಿಯುತ್ತಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದೊಂದು ವಾರದಿಂದ ನಿರಂತರ ಮಳೆಗೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ನೆಲ್ಲಿಬೀಡು ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ.
ಕಳಸದಿಂದ ಉಡುಪಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಸಂಪೂರ್ಣ ಬಂದ್ ಆಗಿದೆ. ಕಳಸದಿಂದ ಕುದುರೆಮುಖ ಮಾರ್ಗವಾಗಿ ಉಡುಪಿ ಸಂಪರ್ಕಿಸುವ ಸೇತುವೆಯೂ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಒಂದೆಡೆ ಜಾಂಬಳೆ ಹೊಳೆ ಪ್ರವಾಹದಿಂದಾಗಿ ಸೇತುವೆಗಳು ಮುಳುಗಡೆಯಾಗಿದ್ದು, ಮತ್ತೊಂದೆಡೆ ಭದ್ರಾ ನದಿ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೇಮಾವತಿ, ತುಂಗಾ, ಭದ್ರಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಚಿಕ್ಕಮಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿವೆ.