ಉಡುಪಿ: ನಿರಂತರ ಮಳೆಯಿಂದಾಗಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಹಾನಿಯುಂಟಾಗಿದ್ದು, 4 ಜಿಲ್ಲೆಗಳಲ್ಲಿ ವಾಡಿಕೆಗಿಂತಲು ಹೆಚ್ಚು ಮಳೆಯಾಗಿ ಅನಾಹುತಗಳು ಸಂಭವಿಸಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮಳೆಯಿಂದಾಗಿ ಇಡೀ ರಾಜ್ಯದಲ್ಲಿ ಈವರೆಗೆ 32 ಜನರು ಸಾವನ್ನಪ್ಪಿದ್ದಾರೆ. ಐವರು ನಾಪತ್ತೆಯಾಗಿದ್ದು, 34 ಜನರು ಗಾಯಗೊಂಡಿದ್ದಾರೆ ಎಂದರು.
4 NDRF, 4 SDRF ತಂಡಗಳು ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ದಕ್ಷಿಣ ಕನ್ನಡದಲ್ಲಿ ಮಳೆಯಿಂದಾಗಿ ಐವರು ಮೃತಪಟ್ಟಿದ್ದಾರೆ. ಉತ್ತರ ಕನ್ನಡದಲ್ಲಿ ಮೂವರು ಮೃತಪಟ್ಟಿದ್ದಾರೆ. 355 ಹೆಕ್ಟೇರ್ ಬೆಳೆ ನಾಶವಾಗಿದ್ದು, 1065 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ 2,086 ರಸ್ತೆಗಳು ಹಾನಿಯಾಗಿವೆ ಎಂದು ತಿಳಿಸಿದರು.
ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ 5 ಲಕ್ಷ ರೂಪಾಯಿ, ಭಾಗಶಃ ಹಾನಿಯಾದ ಮನೆಗಳಿಗೆ 3 ಲಕ್ಷ ರೂಪಾಯಿ ಹಾಗೂ ಸ್ವಲ್ಪ ಪ್ರಮಾಣಲ್ಲಿ ಹಾನಿಯಾದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಬೆಳೆ ಹಾನಿ ಕುರಿತು ವರದಿ ಬಂದ ತಕ್ಷಣ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.