ರಾಜ್ಯದಲ್ಲಿ ಈ ಬಾರಿ ಮಳೆ ಅಬ್ಬರಿಸಿದ್ದು, ಇದರಿಂದ ಜನ ತತ್ತರಿಸಿ ಹೋಗಿದ್ದರು. ಧಾರಾಕಾರವಾಗಿ ಸುರಿದ ಮಳೆಯ ಕಾರಣಕ್ಕೆ ಹಳ್ಳ ಕೊಳ್ಳಗಳು, ಕೆರೆ ನದಿಗಳು ತುಂಬಿ ಹರಿದಿದ್ದು, ರಸ್ತೆಗಳು ಜಲಾವೃತವಾಗಿದ್ದವು. ಅಲ್ಲದೇ ನೂರಾರು ಎಕರೆ ಪ್ರದೇಶದ ಹೊಲಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಬೆಳೆ ಹಾನಿಯೂ ಸಂಭವಿಸಿತ್ತು.
ಆದರೆ ಕಳೆದ ಕೆಲವು ದಿನಗಳಿಂದ ಮಳೆ ಬಿಡುವ ನೀಡಿದ್ದು, ಇದೀಗ ನಾಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಮಳೆ ಆಗಲಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ ಎರಡರಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಚಾಮರಾಜ ನಗರ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಶಾನ್ಯ ಮುಂಗಾರು ಪ್ರಾರಂಭವಾದ ನಂತರ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.