ಕಾರವಾರ: ರಾಜ್ಯಾಧ್ಯಂತ ಮತ್ತೆ ಮಳೆಯ ಅಬ್ಬರ ಜೋರಾಗಿದ್ದು, ಕರಾವಳಿ ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿವೆ. ಹಲವೆಡೆ ಗುಡ್ಡಕುಸಿತ, ಭೂಕುಸಿತವುಂಟಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮನೆಗಳ ಮೇಲೆ ಗುಡ್ಡ ಕುಸಿತವುಂಟಾಗುತ್ತಿದೆ. ಮತ್ತೊಂದೆಡೆ ನದಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮುಂಡಳ್ಳಿ, ಮುಟ್ಟಳ್ಳಿಯಲ್ಲಿ ಭೂಕುಸಿತವುಂತಾಗಿದೆ. ಮುಂಜಾಗೃತಾ ಕ್ರಮವಾಗಿ ಭಟ್ಕಳ ತಾಲೂಕಿನಾದ್ಯಂತ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಮಳೆಯಾಗುತ್ತಿದ್ದು, ಸುಳ್ಯ, ಕಡಬ, ಸುಬ್ರಹ್ಮಣ್ಯದಲ್ಲಿ ವರುಣಾರ್ಭಟಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.