ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ, ಸೇತುವೆಗಳು ಜಲಾವೃತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದಲ್ಲಿ ಮನೆಯೊಂದು ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದಿದೆ. ಗಂಗಾವತಿ ನದಿ ಪ್ರವಾಹದಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮಣ್ಣಿನ ಗೋಡೆಯಿಂದ ನಿರ್ಮಾಣವಾಗಿದ್ದ ಬೃಹತ್ ಮನೆ ನೆಲಸಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸುಂಕಸಾಳ, ರಾಮನಗುಳಿ, ಹೊನ್ನಳಿ ಸೇರಿದಂತೆ ಅಂಕೋಲಾ ತಾಲೂಕಿನ ಹತ್ತಾರು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಇನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಸಾಗರ-ತಾಳಗೊಪ್ಪ ಮಾರ್ಗದ ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದು, ತಾಳಗೊಪ್ಪ ರೈಲು ಸಂಚಾರ ಕೂಡ ಬಂದ್ ಆಗಿದೆ. ಸಾಗರದ ಜಂಬಗಾಲು ನಿಲ್ದಾಣದಲ್ಲೇ ರೈಲುಗಳು ನಿಂತಿವೆ.
ಕಾರವಾರ, ಅಂಕೋಲಾ, ಕುಮಟಾ, ಯಲ್ಲಾಪುರ, ಶಿರಸಿ ಹಾಗೂ ಹಳಿಯಾಳ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎದೆ ಮಟ್ಟಕ್ಕೆ ನೀರು ನಿಂತಿದ್ದು, ಅಂಕೋಲಾ, ಯಲ್ಲಾಪುರ, ಹುಬ್ಬಳ್ಳಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇದೇ ವೇಳೆ ಜಿಲ್ಲೆಯ ಸುಂಕಸಾಳ ಬಳಿ ಪ್ರವಾಹದಿಂದಾಗಿ ಹೋಟೆಲ್ ನಲ್ಲಿ ಸಿಲುಕಿದ್ದ 25 ಪ್ರವಾಸಿಗರನ್ನು ನೌಕಾದಳದ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.