ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ವರುಣಾರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕರಾವಳಿ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯಿಂದ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಘಾಟ್ ಬಳಿ ಮತ್ತೆ ಭೂ ಕುಸಿತ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಶೃಂಗೇರಿ ಶಾರದಾಂಬ ದೇವಸ್ಥಾನದ ಬಳಿ ತುಂಗಾ ನದಿಯ ಅಬ್ಬರಕ್ಕೆ ದೇವಾಲಯದ ಪಾರ್ಕಿಂಗ್ ನಲ್ಲಿ ನೀರು ನುಗ್ಗಿದೆ. ಪ್ರವಾಸಿಗರ ವಾಹನಗಳು ಮುಳುಗಡೆಯಾಗಿವೆ. ಗಾಂಧಿ ಮೈದಾನ, ಪ್ಯಾರ್ಲರ್ ರಸ್ತೆಗೂ ನೀರು ನುಗ್ಗಿದೆ, ಈ ಭಾಗದಲ್ಲಿ ರಸ್ತೆಗಳೇ ಜಲಾವೃತಗೊಂಡಿವೆ.
ಕುದುರೆಮುಖದ ಬಳಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಜಾಂಬಳೆ ಬಳಿ ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಪೂರ್ಣ ಜಲಾವೃತವಾಗಿವೆ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮರಗಳು ಧರಾಶಾಹಿಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಯಿಂದಾಗಿ ಕಾಳಿ ನದಿ ಉಕ್ಕಿ ಹರಿಯುತ್ತಿದೆ. ಕದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಮಹಾಮಾಯ ದೇವಾಲಯದ ಆವರಣ ಜಲಾವೃತಗೊಂಡಿದೆ. ಭದ್ರಾ ಡ್ಯಾಂ ಸುತ್ತಮುತ್ತಲಿನ 100ಕ್ಕೂ ಹೆಚ್ಚು ಗ್ರಾಮದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬೋರ್ಗರೆದು ಹರಿಯುತ್ತಿದ್ದು, ಪ್ರವಾಸಿಗರಿಗೆ, ಭಕ್ತರಿಗೆ ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ದೇವಾಲಯದ ಸ್ನಾನಘಟ್ಟ ಜಲಾವೃತಗೊಂಡಿದೆ.
ಮಳೆಯಿಂದಾಗಿ ಶಿರಾಡಿಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಭೂಕುಸಿತವುಂಟಾಗಿದೆ. ದೋಣಿಗಲ್ ಬಳಿ ದರ್ಗಾ ಸಮೀಪ ಭೂಕುಸಿತವಾಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೊಡಗು ಜಿಲ್ಲೆಯಾಧ್ಯಂತ ಮಳೆ ಅಬ್ಬರಕ್ಕೆ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಭಾಗಮಂಡಲ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ನೀರಿನಲ್ಲಿ ಮುಳುಗಿದೆ. ಸುಂಟಿಕೊಪ್ಪ-ಮಾದಾಪುರ ರಸ್ತೆ ಮಧ್ಯೆ ಮರಗಳು ಬಿದ್ದಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.