ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಭೀತಿ ಉಂಟಾಗಿದ್ದು, ಉತ್ತರ ಕನ್ನಡ, ಬೆಳಗಾವಿ, ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರಿ ಅನಾಹುತಗಳು ಸಂಭವಿಸಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪ್ರವಾಹ ಪರಿಶೀಲನೆಗೆ ಬೆಳಗಾವಿಗೆ ತೆರಳುವ ಮುನ್ನ ಮಾತನಾಡಿದ ಸಚಿವರು, ಪರಿಸ್ಥಿತಿ ನಿಭಾಯಿಸಲು 7 ಎನ್.ಡಿ.ಆರ್.ಎಫ್. ತಂಡ ನಿಯೋಜಿಸಲಾಗಿದೆ. 15 ಎಸ್.ಡಿ.ಆರ್.ಎಫ್. ನಿಯೋಜಿಸಲಾಗಿದೆ. ಭಾರಿ ಮಳೆಯಿಂದಾಗಿ 73 ರಾಷ್ಟ್ರೀಯ ಹೆದ್ದಾರಿಗಳು ಕುಸಿದಿವೆ. 16 ಸ್ಥಳಗಳಲ್ಲಿ ಭೂ ಕುಸಿತವುಂತಾಗಿದೆ. 134 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಒಂದು ತಿಂಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದರು.
ಕರಾವಳಿ ಭಾಗದಲ್ಲಿ ಇನ್ನೂ 3 ದಿನ ಭಾರಿ ಮಳೆಯಾಗಲಿದೆ. ಪ್ರವಾಹದಲ್ಲಿ ಸಿಲುಕಿದ್ದ 153 ಜನರನ್ನು ರಕ್ಷಿಸಲಾಗಿದ್ದು, ಒಟ್ಟು 31,360 ಜನರನ್ನು ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಅವಘಡದಲ್ಲಿ ರಾಜ್ಯದಲ್ಲಿ 9 ಜನರು ಸಾವನ್ನಪ್ಪಿದ್ದು, ಮೂವರು ಕಣ್ಮರೆಯಾಗಿದ್ದಾರೆ. 24417 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.