ಬೆಳಗಾವಿ: ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರ ಸಂಘ ನಡೆಸುತ್ತಿದ್ದ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿದಿದ್ದು, ವಕೀಲರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ವಕೀಲರ ಸಂಘದ ಮನವೊಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ವಕೀಲರು ತಮ್ಮ ಮೇಲಿನ ಹಲ್ಲೆ, ದಾಳಿಯನ್ನು ಖಂಡಿಸಿ ಹಾಗೂ ಹಿತ ರಕ್ಷಣೆ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅವರ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ ಎಂದು ತಿಳಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿ, ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಸಮ್ಮತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಭಟನಾಕಾರ ವಕೀಲರಿಗೆ ತಿಳಿಸಲಾಗಿದ್ದು, ಧರಣಿ ಹಿಂಪಡೆದಿದ್ದಾರೆ ಎಂದು ತಿಳಿಸಿದರು.