ಫ್ಲ್ಯಾಟ್ ನಿರ್ಮಿಸಿ ಕೊಡುವುದಾಗಿ ಹೇಳಿ ಹಣ ಹೂಡಿಕೆ ಮಾಡಿಸಿಕೊಂಡ ಬಳಿಕ ವಂಚನೆ ಮಾಡಿದ ಪ್ರಕರಣದಲ್ಲಿ ಮಂತ್ರಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿ ಹಾಗೂ ಅವರ ಪುತ್ರ ಪ್ರತೀಕ್ ಮಂತ್ರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
2019ರಲ್ಲಿ ಈ ಕುರಿತಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ತನಿಖೆಗಾಗಿ ಸಿಐಡಿ ಗೆ ವರ್ಗಾಯಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಈ ಪ್ರಕರಣದಲ್ಲಿ ಕೆಲವು ಬ್ಯಾಂಕ್ ಸಿಬ್ಬಂದಿಯೂ ಸಹ ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸಹ ಸಿಐಡಿ ತನಿಖೆ ನಡೆಸುತ್ತದೆ. ಮಂತ್ರಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿ ಅಕ್ರಮ ಹಣ ವರ್ಗಾವಣೆ ಕಾಯಿದೆ ಅನ್ವಯ ಜಾರಿ ನಿರ್ದೇಶನಾಲಯದಿಂದ ಕೂಡ ಈ ಹಿಂದೆ ಬಂಧನಕ್ಕೊಳಗಾಗಿದ್ದು, ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಹೇಳಲಾಗಿದೆ.