ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಿದೆ. ಇಪಿಎಫ್‌ಒ ತನ್ನ ಟ್ವಿಟರ್ ಖಾತೆಯ ಮೂಲಕ ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸದಂತೆ ಸದಸ್ಯರಿಗೆ ಸೂಚಿಸಿದೆ.
ಆಧಾರ್, ಪಾನ್, ಯುಎಎನ್, ಬ್ಯಾಂಕ್ ಖಾತೆಗಳು ಅಥವಾ ಒಟಿಪಿಯಂತಹ ವೈಯಕ್ತಿಕ ಮಾಹಿತಿಯನ್ನು ಕೇಳಿದಾಗ ಅವುಗಳನ್ನು ಬಹಿರಂಗಪಡಿಸಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಫೋನ್, ಸಾಮಾಜಿಕ ಮಾಧ್ಯಮ, WhatsApp, ಇತ್ಯಾದಿಗಳ ಮೂಲಕ ವೈಯಕ್ತಿಕ ಮಾಹಿತಿಯನ್ನು ಪಿಎಫ್ ಸಂಸ್ಥೆ ಕೇಳುವುದೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಯಾವುದೇ ಸೇವೆಗಳಿಗೆ ವಾಟ್ಸಾಪ್, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಹಣವನ್ನು ಠೇವಣಿ ಮಾಡುವಂತೆ ಕೇಳುವುದಿಲ್ಲ. ಹಾಗಾಗಿ ಯಾರಾದರೂ ಆ ರೀತಿ ಹಣ ಡೆಪಾಸಿಟ್ ಮಾಡಲು ಸೂಚಿಸಿದ್ರೆ ಆ ರೀತಿ ಮಾಡಬಾರದೆಂದು ಹೇಳಿದೆ.
ಅಷ್ಟೇ ಅಲ್ಲ ವೈಯಕ್ತಿಕ ಮಾಹಿತಿಯನ್ನು ಕೇಳುವ ಕರೆಗಳು ಅಥವಾ ಸಂದೇಶಗಳಿಗೆ ಉತ್ತರಿಸದಂತೆ ಎಚ್ಚರಿಕೆ ನೀಡಿದೆ. ಇಪಿಎಫ್‌ಒ ಸದಸ್ಯರು ಇಂತಹ ವಂಚನೆಗಳಿಗೆ ಒಳಗಾಗದಂತೆ ತಮ್ಮ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಡಿಜಿಲಾಕರ್ ವ್ಯವಸ್ಥೆಯೂ ಇದೆ. EPFOದ ಕೆಲವು ಸೇವೆಗಳಿಗೆ ಡಿಜಿಲಾಕರ್‌ನಲ್ಲಿ ಪ್ರವೇಶವಿದೆ. ಡಿಜಿಲಾಕರ್ನಲ್ಲಿ ನಿಮ್ಮ ದಾಖಲೆಗಳು, ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಡಿಜಿಲಾಕರ್ನಲ್ಲಿರುವ ಇಪಿಎಫ್‌ಒ ಸೇವೆಗಳೆಂದರೆ ಯುಎಎನ್ ಕಾರ್ಡ್, ಪಿಂಚಣಿ ಪಾವತಿ ಆದೇಶ (PPO) ಮತ್ತು ಸ್ಕೀಮ್ ಪ್ರಮಾಣಪತ್ರ. ಇದೊಂದು ಕ್ಲೌಡ್ ಆಧಾರಿತ ಅಪ್ಲಿಕೇಶನ್. ಐಒಎಸ್ ಮತ್ತು ಆಂಡ್ರಾಯ್ಡ್ ಗೆಜೆಟ್‌ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.