ಯಾದಗಿರಿ: ವಜಾಗೊಂಡಿದ್ದ ಎ ಎಸ್ ಐ ಓರ್ವ ಲೋಕಾಯುಕ್ತರ ಹೆಸರು ಹೆಳಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮುರುಗಪ್ಪ ಲೋಕಾಯುಕ್ತ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪಿ. ಮುರುಗಪ್ಪ, ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ, ನಾನು ಯಾದಗಿರಿ ಲೋಕಾಯುಕ್ತ ಡಿ ವೈ ಎಸ್ ಪಿ ಅರುಣಕುಮಾರ್ ಎಂದು ಹೇಳಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿದೆ. ದಾಳಿ ನಡೆಸಲಾಗುವುದು ಎಂದು ಹೇಳಿ ಬೇಗ ತಲೆಮರೆಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದನಂತೆ. ಬಳಿಕ ಹಣಕ್ಕೆ ಬೇಡಿಕೆ ಇಡುತ್ತಿದ್ದನಂತೆ.
ಇದೇ ರೀತಿ ಕಳೆದ 5 ತಿಂಗಳ ಹಿಂದೆ ಹಿರಿಯ ಜೆಸ್ಕಾಂ ಅಧಿಕಾರಿಯಿಂದ 5 ಲಕ್ಷ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಗದಗ, ರಾಯಚೂರಿನಲ್ಲಿಯೂ ಇದೇ ರೀತಿ ವಂಚಿಸಿ ಜೈಲು ಸೇರಿದ್ದ ಮುರುಗಪ್ಪ, ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾನೆ. ಕಲಬುರ್ಗಿ, ಯಾದಗಿರಿ ಜಿಲ್ಲೆಯ ಹಲವು ಅಧಿಕಾರಿಗಳಿಗೆ ವಂಚಿಸಿರುವ ಮುರುಗಪ್ಪ ತಲೆಮರೆಸಿಕೊಂಡಿದ್ದಾನೆ.
ಮುರುಗಪ್ಪ ವಿರುದ್ಧ ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ.