ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತಮಗೆ ಲಭಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಜೊತೆ ತಮ್ಮ ಪಕ್ಷ ಮೈತ್ರಿ ಮಾಡಿಕೊಂಡಿದ್ದ ಕಾರಣ ನಿರಾಸೆಯಾಗಿತ್ತು.
ಜೆಡಿಎಸ್ ಪಕ್ಷಕ್ಕೆ ಮಂಡ್ಯ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿದ್ದು, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಮಂಡ್ಯ ಕ್ಷೇತ್ರದ ಟಿಕೆಟ್ ತಮಗೇ ನೀಡಬೇಕೆಂದು ಅಂತಿಮ ಕ್ಷಣದವರೆಗೂ ಬಿಜೆಪಿ ಉನ್ನತ ನಾಯಕರ ಜೊತೆ ಮಾತುಕತೆ ನಡೆಸಿದ್ದ ಸುಮಲತಾ ಅಂಬರೀಶ್ ಮನವೊಲಿಕೆ ಬಳಿಕ ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದ್ದರು. ಆದರೆ ಆ ಸಂದರ್ಭದಲ್ಲಿ ಮುಂದೆ ತಮಗೆ ಬೇರೆ ಅವಕಾಶ ನೀಡುವುದಾಗಿ ಬಿಜೆಪಿ ವರಿಷ್ಠರು ಸುಮಲತಾ ಅವರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ.
ಇದೀಗ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್ 13ರಂದು ದ್ವೈ ವಾರ್ಷಿಕ ಚುನಾವಣೆ ನಡೆಯಲಿದ್ದು, ಬಿಜೆಪಿ ನಿರಾಯಾಸವಾಗಿ ಮೂರು ಸ್ಥಾನಗಳನ್ನು ಗಳಿಸಬಹುದಾಗಿದೆ. ಹೀಗಾಗಿ ಸುಮಲತಾ ಅಂಬರೀಶ್ ಅವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನುಳಿದಂತೆ ಎರಡು ಸ್ಥಾನಗಳಿಗೆ ಹಾಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಪ್ರೊ. ಎಂ ನಾಗರಾಜ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಳೆದುಕೊಂಡಿದ್ದ ನಳಿನ್ ಕುಮಾರ್ ಕಟೀಲ್, ಡಿ.ವಿ. ಸದಾನಂದ ಗೌಡ, ಪ್ರತಾಪ್ ಸಿಂಹ, ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಸಿ.ಟಿ. ರವಿ ಮೊದಲಾದವರು ಸಹ ಪ್ರಬಲ ಆಕಾಂಕ್ಷಿಗಳಾಗಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.