ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ. ಹಿರಿಯ ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಬಗ್ಗೆ ಸುದ್ದಿ ಹರಿದಾಡುತ್ತಿದ್ದರೂ ಹೈಕಮಾಂಡ್ ಮೌನವಾಗಿರುವುದಕ್ಕೆ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ.
ಟಿಕೆಟ್ ಕೈತಪ್ಪುವ ಬಗ್ಗೆ ಸುದ್ದಿಯಾಗುತ್ತಿದೆ ವರಿಷ್ಠರು ಮಧ್ಯಪ್ರವೇಶ ಮಾಡಬೇಕು ಎಂದು ಸಂಸದ ಡಿ.ವಿ. ಸದಾನಂದಗೌಡ ಒತ್ತಾಯಿಸಿದ್ದಾರೆ. ಈ ನಡುವೆ ಚುನಾವಣಾ ನಿವೃತ್ತಿ ಪಡೆಯುವುದಾಗಿ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಸಂಸದ ಸಂಗಣ್ಣ ಕರಡಿ ಕೂಡ ಟಿಕೆಟ್ ಸಿಗದಿದ್ದಲ್ಲಿ ನಿವೃತ್ತಿ ಪಡೆಯುವ ಬಗ್ಗೆ ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಸಂಸದ ಬಸವರಾಜ್, ತನ್ನ ಸೀಟ್ ನ್ನು ವಿ. ಸೋಮಣ್ಣಗೆ ಕೊಡುತ್ತಾರೆ. ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ಟಿಕೆಟ್ ಸಿಗಲ್ಲ ಎಂಬ ವದಂತಿ ಹಬ್ಬಿದರೆ ಕ್ಷೇತ್ರದಲ್ಲಿ ನಾವು ಕೆಲಸ ಮಾಡುವುದಾದರೂ ಹೇಗೆ ಎಂದು ಬಿಜೆಪಿ ಸಂಸದರು ಗರಂ ಆಗಿದ್ದಾರೆ. ವರಿಷ್ಠರ ಮೌನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.