ರಾಜ್ಯ ರಾಜಧಾನಿಯ ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದ ಒಳಗೆ ಸಂದರ್ಶಕರು ಕ್ಯಾಮೆರಾ ಕೊಂಡೊಯ್ಯುವುದನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಒಂದು ವೇಳೆ ಕಣ್ತಪ್ಪಿಸಿ ಕ್ಯಾಮರಾ ಕೊಂಡೊಯ್ದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಹಿಂದೆ ಪ್ರವೇಶ ಶುಲ್ಕದ ಜೊತೆ ಹೆಚ್ಚುವರಿಯಾಗಿ 50 ರೂ. ಪಾವತಿಸಿದರೆ ಸಂದರ್ಶಕರು ಕ್ಯಾಮೆರಾ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತಾದರೂ ಬಹುತೇಕ ಸಂದರ್ಭಗಳಲ್ಲಿ ಇದು ದುರುಪಯೋಗವಾಗಿರುವ ಕಾರಣ ತೋಟಗಾರಿಕೆ ಇಲಾಖೆ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಅನುಮತಿ ಪಡೆದು ಕ್ಯಾಮೆರಾ ಕೊಂಡೊಯ್ದ ಕೆಲವರು ಮದುವೆ ಫೋಟೋ ಶೂಟ್ ಮೊದಲಾದವಕ್ಕೆ ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಇತರೆ ಸಂದರ್ಶಕರಿಗೆ ಮುಜುಗರವಾಗುವ ರೀತಿಯಲ್ಲಿ ಕ್ಯಾಮರಾ ಬಳಕೆಯಾಗಿರುವ ಕಾರಣ ಇದೀಗ ಲಾಲ್ ಬಾಗ್ ಒಳಗೆ ಕ್ಯಾಮರಾವನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಲಾಗಿದೆ.