ಬೆಂಗಳೂರು: ಕೊರೊನಾ ಮೂರನೇ ಅಲೆ ಹಾಗೂ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಲಾಕ್ ಡೌನ್ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ, ಅನಗತ್ಯ ಗೊಂದಲ ಸೃಷ್ಟಿಸುವ ಸುದ್ದಿ ಹರಡಬೇಡಿ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್, ಈಗಾಗಲೇ ಸಾಕಷ್ಟು ಜನರು ಕೋವಿಡ್ ನಿಂದಾಗಿ ಸಂಕಷ್ಟ ಎದುರಿಸಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಮಸ್ಯೆ ಎದುರಿಸಿದ್ದಾರೆ. ಈಗಷ್ಟೇ ಎಲ್ಲಾ ಕ್ಷೇತ್ರಗಳು ಮತ್ತೆ ಚೇತರಿಕೆಯತ್ತ ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ’ಮತ್ತೆ ಲಾಕ್ ಡೌನ್’ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡುವ ಕೆಲಸ ಮಾಡಬಾರದು. ಸರ್ಕಾರದ ಮುಂದೆ ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ, ಅಂತಹ ಯಾವ ಆಲೋಚನೆಯೂ ಇಲ್ಲ. ಅನಗತ್ಯವಾಗಿ ಸುಳ್ಳು ಸುದ್ದಿ ಹರಡಿ ಜನರಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾಮಾಜಿಕ ಜಾಲತಾಣದ ವೇದಿಕೆಯನ್ನು ಒಳ್ಳೆಯ, ಖಚಿತ ಮಾಹಿತಿಯನ್ನೊಳಗೊಂಡ ಸುದ್ದಿಗಳನ್ನು ವೇಗವಾಗಿ ಜನರಿಗೆ ತಲುಪಿಸಲು ಬಳಕೆ ಮಾಡಬೇಕೇ ಹೊರತು ಗೊಂದಲಮಯ ಸುದ್ದಿಗಳನ್ನು, ಸುಳ್ಳು ಸುದ್ದಿಗಳನ್ನು ಹಬ್ಬಿಸಲು ವೇದಿಕೆಯಾಗಿ ಬಳಸಿಕೊಳ್ಳಬಾರದು. ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಹೊಸ ರೂಪಾಂತರಿ ಒಮಿಕ್ರಾನ್ ವೇಗವಾಗಿ ಹರಡುತ್ತೆ, ಆದರೆ ಪರಿಣಾಮ ಕಡಿಮೆ ಎಂದು ಹೇಳಲಾಗುತ್ತಿದೆ. ನಾಡಿಬಡಿತ ಹೆಚ್ಚಾಗುವುದು, ವಾಂತಿ, ಸುಸ್ತು ಇವು ಒಮಿಕ್ರಾನ್ ರೋಗ ಲಕ್ಷಣಗಳು ಎಂದು ಈಗಾಗಲೇ ಹೊಸ ವೈರಸ್ ಪತ್ತೆಯಾಗಿರುವ ದೇಶಗಳಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಒಮಿಕ್ರಾನ್ ಬಗ್ಗೆ ಇನ್ನೂ ನಿಖರ ಲಕ್ಷಣಗಳು ತಿಳಿದುಬಂದಿಲ್ಲ. ಹಾಗಾಗಿ ಆತಂಕ ಪಡುವ ಅಗತ್ಯ ಇಲ್ಲ ಆದರೆ ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮೂಲಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.