ಶಿವಮೊಗ್ಗ: ಕಾಂಗ್ರೆಸ್ ನಾಯಕರು ಎಸಿ ರೂಂ ನಲ್ಲಿ ಕುಳಿತು ರಾಜ್ಯ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎಂದರೆ ಟೀಕೆ ಮಾಡುವುದು ಎನ್ನುವಂತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯಾಕ್ಸಿನ್ ನೀಡಿಕೆಯಲ್ಲಿ ಸರ್ಕಾರ ವಿಫಲ ಎಂದು ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪಂಜಾಬ್ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಹೋಗಿ ನೋಡಲಿ. ಆ ಎರಡು ರಾಜ್ಯಗಳಲ್ಲಿ ಕೊರೊನಾ ಇಲ್ವಾ? ಅಲ್ಲಿ ಜನರು ಮೃತಪಟ್ಟಿಲ್ವಾ? ಅಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ನೀಡಲಾಗಿದೆಯೇ? ಮೊದಲು ಕಾಂಗ್ರೆಸ್ ನಾಯಕರು ಆ ರಾಜ್ಯಗಳನ್ನು ರಾಮರಾಜ್ಯವನ್ನಾಗಿ ಮಾಡಲಿ. ನಂತರ ಇಲ್ಲಿ ಬಂದು ಮಾತನಾಡಲಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಜನರು ಇಷ್ಟೊತ್ತಿಗೆ ಲಸಿಕೆ ಪಡೆದು ಸುರಕ್ಷಿತರಾಗಿರುತ್ತಿದ್ದರು. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಲಸಿಕೆ ದಿಕ್ಕು ತಪ್ಪಿಸಿದ್ದೇ ಕಾಂಗ್ರೆಸ್. ಸಂಕಷ್ಟದ ಸಂದರ್ಭದಲ್ಲಿ ನೀಚ ರಾಜಕಾರಣ ಮಾಡಿದವರು ಕಾಂಗ್ರೆಸ್ ನಾಯಕರು. ಈಗ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.