ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರುಗಳಿಂದ ಘೋಷಣೆಗಳ ಮಹಾಪೂರವೇ ಹರಿದು ಬರುತ್ತದೆ. ಅಲ್ಲದೆ ಉಚಿತ ಕೊಡುಗೆಗಳ ಭರವಸೆ ನೀಡಲಾಗುತ್ತದೆ. ಈ ಕುರಿತ ಚರ್ಚೆ ನಡೆದಿರುವುದರ ಮಧ್ಯೆ ಇದೀಗ ಕೇಂದ್ರ ಚುನಾವಣಾ ಆಯೋಗ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.
ರ್ಯಾಲಿಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅದರಲ್ಲಿ ಪಾಲ್ಗೊಂಡಿದ್ದವರಿಗೆ ಸೀರೆ – ಶರ್ಟ್ ಮೊದಲಾದವುಗಳ ವಿತರಣೆಗೆ ಬ್ರೇಕ್ ಹಾಕಲಾಗಿದೆ. ಆದರೆ ಕ್ಯಾಪ್, ಮಾಸ್ಕ್ ಕರ್ಚೀಫ್ ನೀಡಲು ಕೇಂದ್ರ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.
ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ (ಖಾಸಗಿ ಅಥವಾ ಸರ್ಕಾರಿ) ಮೈದಾನಗಳನ್ನು ಬಳಸಿಕೊಳ್ಳದಂತೆ ಸೂಚಿಸಲಾಗಿದ್ದು, ಜೊತೆಗೆ ಜಾಹೀರಾತು ಫಲಕಗಳನ್ನು ಹಾಕಲು ಎಲ್ಲ ಪಕ್ಷಗಳಿಗೂ ಸ್ಥಳೀಯಾಡಳಿತ ಸಮಾನ ಅವಕಾಶ ನೀಡಬೇಕೆಂದು ತಿಳಿಸಲಾಗಿದೆ.
ಗೋಡೆ ಮೇಲೆ ಪೋಸ್ಟರ್ ಅಂಟಿಸುವ ಕುರಿತು ಸ್ಥಳೀಯ ಆಡಳಿತ ನಿಷೇಧ ವಿಧಿಸಿದ್ದ ಸಂದರ್ಭದಲ್ಲಿ ಅದು ಖಾಸಗಿಯವರಿಗೆ ಸೇರಿದ ಸ್ವತ್ತಾದರೂ ಸಹ ನಿಯಮವನ್ನು ಉಲ್ಲಂಘಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.