ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಭಂಗವುಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ಕಾನೂನಿನ ಬಗ್ಗೆ ಭಯವಿಲ್ಲದವರನ್ನು ಕಾನೂನು ವ್ಯಾಪ್ತಿಗೆ ತಂದು ಕ್ರಮ ಕೈಗೊಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಈ ಹಿಂದೆ ಶಿವಮೊಗ್ಗ ರೌಡಿಗಳ ಟ್ರೇನಿಂಗ್ ಸೆಂಟರ್ ಆಗಿತ್ತು. ರೌಡಿಗಳ ತರಬೇತಿ ಕೇಂದ್ರವಾಗಿತ್ತು. ಈಗ ಎಲ್ಲವನ್ನೂ ಮಟ್ಟಹಾಕಲು ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಗಾಂಜಾ ಪೂರೈಕೆ ಪ್ರಕರಣಗಳು ಹೆಚ್ಚುತ್ತಿವೆ. ಈ ಗ್ಯಾಂಗ್ ಗಳನ್ನು ಹೆಡೆಮುರಿಕಟ್ಟುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಲಂಚ ಪ್ರಕರಣದ ವಿಚಾರವಾಗಿ ಮಾತನಾಡಿದ ಸಚಿವರು, ಪತ್ರಕರ್ತರಿಗೆ ಎಲ್ಲಾ ಸರ್ಕಾರದ ಅವಧಿಯಲ್ಲಿಯೂ ಗಿಫ್ಟ್ ಕೊಡುತ್ತಾರೆ. ಆದರೆ ಹಣ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಿಕ್ಕ ಮಾಹಿತಿ ಪ್ರಕಾರ ಅದು ಸ್ವೀಟ್ ಬಾಕ್ಸ್ ಆಗಿದೆ ಎಂದು ಹೇಳಿದರು.