ಬೆಂಗಳೂರು: ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಏನು ವ್ಯವಹಾರ? ಯಾವ ನಂಟು ? ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿ ಶೀಟರ್ ನಿನ್ನೆ ರಾತ್ರಿ ಸಚಿವ ವಿ.ಸೋಮಣ್ಣ ಮನೆಗೆ ಬಂದಿದ್ದೇಕೆ? ಆತನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಸೈಲೆಂಟ್ ಸುನೀಲ, ಫೈಟರ್ ರವಿ, ಬೆತ್ತನಗೆರೆ ಶಂಕರ ಬಿಜೆಪಿ ಜೊತೆಗೆ ಗುರುತಿಸಿಕೊಂಡ ನಂತರ ಈಗ ನಾಗನ ಸರದಿ. ಮೊದಲೆಲ್ಲ ರೌಡಿ ಶೀಟರ್ಗಳು ಪೊಲೀಸರೆದುರು ಪರೇಡ್ ನಡೆಸುತ್ತಿದ್ದರು. ಈಗ ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ಪರೇಡ್ ನಡೆಸಲು ಸಜ್ಜಾಗಿದ್ದಾರೆ! ರೌಡಿಗಳೊಂದಿಗೆ ಬಿಜೆಪಿಗರ ಬಾಂಧವ್ಯ ಹೊರಬರುತ್ತಿರುವಾಗ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೋಮಣ್ಣನವರ ಮನೆಗೆ ಭೇಟಿ ನೀಡಿದ್ದು ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ನೀಡವುದಕ್ಕಾ? ಎಂದು ಕೇಳಿದೆ.
ನಮ್ಮ ಅವಧಿಯಲ್ಲಿ ಸಮಾಜ ಕಂಟಕರಾಗಿದ್ದ ರೌಡಿಗಳ ಎನ್ಕೌಂಟರ್ಗಳಾಗಿದ್ದವು, ರೌಡಿಗಳನ್ನು ಮಟ್ಟಹಾಕಲು ಪೊಲೀಸರಿಗೆ ಸ್ವತಂತ್ರ ನೀಡಲಾಗಿತ್ತು. ಆದರೆ ಈಗ ಬಿಜೆಪಿಗರ ಸಖ್ಯದಿಂದ ರೌಡಿಗಳು ಪೊಲೀಸರೆದುರು ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ, ಪೊಲೀಸರೇ ರೌಡಿಗಳೆದುರು ತಲೆ ತಗ್ಗಿಸಿ ನಿಲ್ಲುವಂತೆ ಅವರ ನೈತಿಕ ಸ್ಥೈರ್ಯ ಕುಸಿದಿದೆ. ಬಿಜೆಪಿ ನಾಯಕರು, ಸಚಿವರೆಲ್ಲ ಸಾಲು ಸಾಲಾಗಿ ರೌಡಿಗಳೊಂದಿಗೆ ಕುಚಿಕು ಕುಚಿಕು ಡಾನ್ಸ್ ಆಡುತ್ತಾ ಭೂಗತಲೋಕವನ್ನು ಮಟ್ಟ ಹಾಕುವ ಪೊಲೀಸರ ಸ್ಥೈರ್ಯವನ್ನು ಕುಸಿಯುವಂತೆ ಮಾಡಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರೌಡಿಗಳ ಕಾಲರ್ ಹಿಡಿದು ಎಳೆದು ತರುತ್ತಿದ್ದ ಪೊಲೀಸರು ಈಗ ಅದೇ ರೌಡಿಗಳಿಗೆ ಎಸ್ಕಾರ್ಟ್ ಒದಗಿಸುವಂತಹ ಸ್ಥಿತಿ ನಿರ್ಮಿಸಿದೆ. ಹಣಬಲದಲ್ಲಿ ರಾಜಕಾರಣ ಮಾಡ್ತಿದ್ದ ಬಿಜೆಪಿ ಈಗ ತೋಳ್ಬಲದ ರಾಜಕೀಯ ಮಾಡಲು ಮುಂದಾಗಿದೆ. ಹಗರಣ, ವೈಫಲ್ಯಗಳ ಸರಮಾಲೆಯನ್ನೇ ಹೊತ್ತಿರುವ ಬಿಜೆಪಿ ಚುನಾವಣೆ ಗೆಲ್ಲುವುದಕ್ಕೆ ಎಲ್ಲಾ ದುಷ್ಟ ಮಾರ್ಗಗಳನ್ನೂ ಹಿಡಿಯುತ್ತಿದೆ. ಮತದಾರ ಮಾಹಿತಿ ಕಳ್ಳತನ ಒಂದೆಡೆಯಾದರೆ, ರೌಡಿಗಳನ್ನು ಬಳಸಿ ಬೆದರಿಸಿ ಮತ ಪಡೆಯಲು ರೌಡಿ ಮೋರ್ಚಾ ಸ್ಥಾಪನೆಗೆ ಹೊಂಚು ಹಾಕಿದೆ.