ಬೆಂಗಳೂರು: ಮೈಸೂರು ಮಾಜಿ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ ಸಾ.ರಾ ಮಹೇಶ್, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದಿಂದ ಔಷಧ ಬಿಡುಗಡೆ ಘೋಷಣೆಯಾದರೂ ಫೈಲ್ ಕೂಡ ಮೂವ್ ಮಾಡಲಿಲ್ಲ. ಮೈಸೂರಿನಲ್ಲಿ ಮೇ ತಿಂಗಳಲ್ಲಿ ಒಂದು ಸಾವಿರ ಜನರು ಕೋವಿಡ್ ನಿಂದ ಸಾವನ್ನಪ್ಪಿದರೆ 238 ಜನ ಸಾವು ಎಂದು ಲೆಕ್ಕ ಕೊಟ್ಟರು. ನಾನು ಸ್ಮಶಾನಗಳಿಗೆ ಹೋಗಿ ಮಾಹಿತಿ ಪಡೆದಿದ್ದೇನೆ. ಇನ್ನು ಬ್ಯಾಗ್ ಖರೀದಿಯಲ್ಲಿಯೂ ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ. ಯಾವುದೇ ಅನುಮತಿಯಿಲ್ಲದೆಯೇ ಬ್ಯಾಗ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಮೈಸೂರಿನ ನಿರ್ಗಮಿತ ಡಿಸಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಗುಡುಗಿದರು.
ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಹಕ್ಕುಚ್ಯುತಿ ಸ್ಪಷ್ಟ ಹಾಗೂ ನೇರವಾಗಿರಬೇಕು. ಅಲ್ಲದೇ ಇಲ್ಲಿ ಹೆಸರು ಹೇಳದೆಯೇ ಹಕ್ಕುಚ್ಯುತಿ ಮಂಡನೆ ಎಂದರೆ ಹೇಗೆ? ಸಾ.ರಾ ಮಹೇಶ್ ಹೇಳುತ್ತಿರುವುದು ಶಿಷ್ಟಾಚಾರ ಉಲ್ಲಂಘನೆ ಅಷ್ಟೇ. ಹಕ್ಕುಚ್ಯುತಿ ಆಗುವುದಿಲ್ಲ. ಶಾಸಕರಾಗಿ ಮಾಡಬೇಕಾದ ಕಾರ್ಯಕ್ಕೆ ಅಡ್ಡಿಯಾದರೆ ಆಗ ಹಕ್ಕುಚ್ಯುತಿ ಮಂಡನೆಗೆ ಅವಕಾಶವಿದೆ. ಆದರೆ ಶಾಸಕರ ಆರೋಪ ಗಮನಿಸಿದರೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.