ದಾವಣಗೆರೆ: ಎಸ್.ಎಸ್. ಮಲ್ಲಿಕಾರ್ಜುನ ರೈಸ್ ಮಿಲ್ ನಲ್ಲಿ ವನ್ಯಜೀವಿಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಇದೀಗ ಕೋರ್ಟ್ ಮೊರೆ ಹೋಗಿದ್ದಾರೆ.
ದಾವಣಗೆರೆಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಜನವರಿ 2ಕ್ಕೆ ವಿಚಾರಣೆ ಮುಂದೂಡಿದೆ.
ಡಿ.21ರಂದು ದಾವಣಗೆರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಆನೆಕೊಂಡ ರಸ್ತೆಯಲ್ಲಿರುವ ಕಲ್ಲೇಶ್ವರ ಮಿಲ್ಸ್ ಹಿಂಭಾಗದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಇಲ್ಲಿ ಜಿಂಕೆಗಳು, ನರಿ, ಮುಂಗುಸಿ, ಕಾಡುಹಂದಿ ಸೇರಿದಂತೆ ಹಲವು ವನ್ಯಜೀವಿಗಳು ಪತ್ತೆಯಾಗಿದ್ದವು.
ಅನುಮತಿಯಿಲ್ಲದೇ ರೈಸ್ ಮಿಲ್ ಒಳಾಂಗಣದಲ್ಲಿ ವನ್ಯಜೀವಿಗಳನ್ನು ಸಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.