ಭಾರತೀಯ ರೈಲ್ವೆ ಇಲಾಖೆಯ ಅಡುಗೆ ವಿಭಾಗದಲ್ಲಿ ಒಮ್ಮೆ ಬಳಸಿ ಬಿಸಾಡುವಂಥಹ ಪ್ಲಾಸ್ಟಿಕ್ ಅನ್ನು ಯೂಸ್ ಮಾಡದಂತೆ ಸದ್ಯದಲ್ಲೇ ಐ.ಆರ್.ಸಿ.ಟಿ.ಸಿ. ಆದೇಶ ಹೊರಡಿಸಲಿದೆ. ಪ್ಲಾಸ್ಟಿಕ್ ಪ್ಲೇಟ್, ಕಪ್, ಸ್ಪೂನ್, ತಟ್ಟೆಗಳು, ಟ್ರೇ ಸೇರಿದಂತೆ ಇತರ ವಸ್ತುಗಳನ್ನು ಸದ್ಯದಲ್ಲೇ ಬದಲಾಯಿಸಲಾಗುತ್ತದೆ.
ದೇಶದಲ್ಲಿ ಒಮ್ಮೆ ಬಳಸಿ ಬಿಸಾಡುವಂಥ ಪ್ಲಾಸ್ಟಿಕ್‌ಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸಹ ಈ ಕ್ರಮಕ್ಕೆ ಮುಂದಾಗಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಪಟ್ಟಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದಾರೆ. ಇದಕ್ಕೆ ಪರ್ಯಾಯ ಮೂಲಗಳಿಗಾಗಿಯೂ ಹುಡುಕಾಟ ನಡೆದಿದೆ.
ಕಾರ್ಡ್ ಬೋರ್ಡ್ ಅಥವಾ ಕಟ್ಟಿಗೆಯ ತಟ್ಟೆ, ಲೋಟಗಳನ್ನು ಬಳಸಲು ಚಿಂತನೆ ನಡೆಸಲಾಗ್ತಿದೆ. ಜುಲೈ 1ರಂದು ಸಿಂಗಲ್ ಯೂಸ್ ಪ್ಲಾಸ್ಟಿಕ್‌ಗೆ ನಿಷೇಧ ಹೇರಲಾಗಿದೆ. ಸರ್ಕಾರ ನಿಷೇಧಿಸಿರುವ ವಸ್ತುಗಳ ಪಟ್ಟಿ ಇಲ್ಲಿದೆ ನೋಡಿ.
ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್, ಬಲೂನ್‌ಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್‌ನಿಂದ ಮಾಡಿರುವ ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಐಸ್ ಕ್ರೀಂ ಸ್ಟಿಕ್, ಥರ್ಮಾಕೋಲ್, ಪ್ಲಾಸ್ಟಿಕ್‌ನಿಂದ ಮಾಡಿದ ಪ್ಲೇಟ್, ಕಪ್, ಗ್ಲಾಸ್, ಫೋರ್ಕ್, ಚಮಚ, ಚಾಕು, ಸ್ಟ್ರಾಗಳು, ಟ್ರೇ ಮತ್ತು ಸ್ಟಿರರ್‌ಗಳು, ಸ್ವೀಟ್ ಬಾಕ್ಸ್‌ಗಳು, ಆಮಂತ್ರಣ ಕಾರ್ಡ್‌ಗಳು ಮತ್ತು ಸಿಗರೇಟ್ ಪ್ಯಾಕೆಟ್‌ಗಳ ಸುತ್ತಲೂ ಸುತ್ತುವ ಫಿಲ್ಮ್, ಪ್ಯಾಕೇಜಿಂಗ್‌ಗೆ ಬಳಸುವ ಪ್ಲಾಸ್ಟಿಕ್, 100-ಮೈಕ್ರಾನ್‌ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಅಥವಾ PVC ಬ್ಯಾನರ್‌ಗಳು, 75 ಮೈಕ್ರಾನ್ ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ.
ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಇಂತಹ ಪ್ಲಾಸ್ಟಿಕ್‌ಗಳನ್ನು ಆಮದು ಮಾಡಿಕೊಳ್ಳುವುದು, ಸಂಗ್ರಹಣೆ, ಉತ್ಪಾದನೆ, ವಿತರಣೆ ಮತ್ತು ಮಾರಾಟ ಎಲ್ಲವನ್ನೂ ನಿಷೇಧಿಸಲಾಗಿದೆ.