ಕಲಬುರ್ಗಿ: ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರನ್ನು ಬಿಟ್ಟು ಮತ್ತೊಂದು ಪ್ಲಾಟ್ ಫಾರ್ಮ್ ನಿಂದ ರೈಲು ತೆರಳಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿ ರೈಲು ನಿಲ್ದಾಣದಿಂದ ತೆಲಂಗಾಣದ ಸಿಕಂದರಾಬಾದ್ ಗೆ ಹೋಗಬೇಕಿದ್ದ ಪ್ರಯಾಣಿಕರು, ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್ ಪ್ರೆಸ್ ಟ್ರೇನ್ ಗಾಗಿ ಬೆಳಿಗ್ಗೆ 6:15ಕ್ಕೆ ಕಲಬುರ್ಗಿ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 1ರಲ್ಲಿ ಕಾಯುತ್ತಿದ್ದರು.
ಆದರೆ ರೈಲು ನಿಲ್ದಾಣದ ಸಿಬ್ಬಂದಿಗಳು ರೈಲು ಬೇರೆ ಪ್ಲಾಟ್ ಫಾರ್ಮ್ ಗೆ ಬರುವ ಬಗ್ಗೆಯಾಗಲಿ, ರೈಲು ಬಂದ ಬಗ್ಗೆಯಾಗಲಿ ಯಾವುದೇ ಮಾಹಿತಿ ಘೋಷಣೆ ಮಾಡಿಲ್ಲ. ಹಾಗಾಗಿ ರೈಲು ಬೇರೆ ಪ್ಲಾಟ್ ಫಾರ್ಮ್ ಮೂಲಕವಾಗಿ ತೆರಳಿದೆ.
ಒಂದನೇ ಪ್ಲಾಟ್ ಫಾರ್ಮ್ ನಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿ ವಿಚಾರಿಸಿದಾಗ ರೈಲು ತೆರಳಿರುವುದು ಬೆಳಕಿಗೆ ಬಂದಿದೆ. ಸಿಟ್ಟಿಗೆದ್ದ ಪ್ರಯಾಣಿಕರು ರೈಲ್ವೆ ಷ್ಟೇಷನ್ ಮ್ಯಾನೇಜರ್ ಕಚೇರಿಗೆ ತೆರಳಿ ಗಲಾಟೆ ನಡೆಸಿದ್ದಾರೆ. ಬಳಿಕ ರೈಲ್ವೆ ಅಧಿಕಾರಿಗಳು ಎಲ್ಲಾ ಪ್ರಯಾಣಿಕರನ್ನು ಹುಸೇನ್ ಸಾಗರ್ ರೈಲಿನಲ್ಲಿ ಸಿಕಂದರಾಬಾದ್ ಗೆ ಕಳುಹಿಸಿರುವ ಪ್ರಸಂಗ ನಡೆದಿದೆ.