ಬೆಂಗಳೂರು: ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡುವುದು ಒಳ್ಳೆಯದಾ ? ಇದು ಸರಿಯೇ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ, ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, 12 ಲಕ್ಷಕ್ಕೂ ಹೆಚ್ಚು ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಿ. ಯಾವ ಕಾರಣಕ್ಕೆ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಾ ? ರೈತರ ಸಾಲ ಮನ್ನಾ ಮಾಡದೇ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಲ್ಲಾ ? ಇದು ಸರಿನಾ ? ಇದೆಲ್ಲ ಬಿಜೆಪಿಯವರ ಮೈಂಡ್ ಸೆಟ್. ಮೊದಲು ಈ ಬಗ್ಗೆ ಉತ್ತರ ಕೊಡಿ ಎಂದು ಗುಡುಗಿದರು.
ನರೇಗಾ ಯೋಜನೆಯ ಹಣ ಕಡಿತ ಮಾಡಿದ್ದೀರಿ. ರಸಗೊಬ್ಬರದ ಸಬ್ಸಿಡಿಯನ್ನೂ ಕೂಡ ತೆಗೆದು ಹಾಕಿದ್ದೀರಿ. ಇನ್ನೆಲ್ಲಿ ರೈತ ಆದಾಯ ದುಪ್ಪಟ್ಟಾಗುತ್ತದೆ, ಕೋಮುವಾದಿ ಅಜೆಂಡಾ ತರಲು ಗೋ ಹತ್ಯೆ ನಿಷೇಧ ಕಾಯಿದೆ ಜಾರಿ ತಂದರು. ಒಂದು ಹಸುವಿಗೆ 60 ರೂಪಾಯಿ ಕೊಡುತ್ತಿದ್ದೀರಿ. ಇದು ಸಾಕಾಗುತ್ತಾ? ಮೊದಲು ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು ಎಂದು ಹೇಳಿದರು.