ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆ ಬಿರುಸಿನಿಂದ ನಡೆಯುತ್ತಿದೆ. ಇದೊಂದು ವ್ಯವಸ್ಥಿತ ಕೊಲೆ ಎಂದು ರೇಣುಕಾಚಾರ್ಯ ಆರೋಪ ಮಾಡಿದ್ದು, ಪೊಲೀಸರ ತನಿಖಾ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಮಧ್ಯೆ ಎಲ್ಲಾ ಆಯಾಮಗಳಿಂದಲೂ ತನಿಖೆಗೆ ಮುಂದಾಗಿರುವ ಪೊಲೀಸರು ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಚಂದ್ರಶೇಖರ್ ನಾಪತ್ತೆಯಾದ ದಿನದಂದು ಅದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಗೆ ತೆರಳಿದ್ದು, ವಿನಯ ಗುರೂಜಿ ಅವರನ್ನು ಭೇಟಿಯಾಗಿದ್ದರು.
ಹೀಗಾಗಿ ವಿನಯ ಗುರೂಜಿಯವರ ಗೌರಿಗದ್ದೆ ಆಶ್ರಮಕ್ಕೆ ತೆರಳಿದ ತನಿಖಾ ತಂಡ, ಚಂದ್ರಶೇಖರ್ ಯಾವ ಕಾರಣಕ್ಕೆ ನಿಮ್ಮನ್ನು ಭೇಟಿಯಾಗಿದ್ದರು. ಈ ಭೇಟಿ ಸಂದರ್ಭದಲ್ಲಿ ತಮ್ಮ ಸಮಸ್ಯೆಯನ್ನು ಚಂದ್ರಶೇಖರ್ ಹೇಳಿಕೊಂಡಿದ್ದಾರಾ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಇದಕ್ಕೆ ಪ್ರತಿಕ್ರಿಯಿಸಿದ ವಿನಯ ಗುರೂಜಿ, ಚಂದ್ರಶೇಖರ್ ಆಶ್ರಮದ ಭಕ್ತರಾಗಿದ್ದು, ಈ ಮೊದಲು ಸಹ ಬಂದಿದ್ದಾರೆ. ಘಟನೆ ನಡೆದ ದಿನದಂದು ಅವರು ತಡವಾಗಿ ಬಂದ ಕಾರಣಕ್ಕೆ ಹೆಚ್ಚಿನ ಮಾತುಕತೆ ನಡೆಯಲಿಲ್ಲ. ಅಲ್ಲದೆ ಜಾಗೃತೆಯಿಂದ ಹೋಗಲು ತಾವು ಸೂಚಿಸಿದ್ದಾಗಿ ವಿನಯ ಗುರೂಜಿ ಹೇಳಿದ್ದಾರೆ ಎಂದು ಹೇಳಲಾಗಿದೆ.