ಬೆಂಗಳೂರು: ರಾಹುಲ್ ಗಾಂಧಿಯವರ ಸಂಸದೀಯ ಸದಸ್ಯತ್ವ ಅನರ್ಹಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಸಂವಿಧಾನಕ್ಕೆ ಧಕ್ಕೆಯುಂಟು ಮಾಡುವ ಕ್ರಮವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇಂತಹ ತೀರ್ಮಾನ ಕೇಂದ್ರ ಸರ್ಕಾರ ಹಾಗೂ ಲೋಕಸಭೆಯಲ್ಲಿ ತೆಗೆದುಕೊಂಡಿರುವುದು ಸಂವಿಧಾನಕ್ಕೆ ಧಕ್ಕೆ ತರುವಂತಹದ್ದಾಗಿದೆ. ವಿಪಕ್ಷಗಳ ನಾಯಕರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಸಲಾಗುತ್ತಿದೆ. ರಾಹುಲ್ ಗಾಂಧಿಯವರ ಕುಟುಂಬದವರು, ಅವರ ಅಜ್ಜಿ, ತಂದೆ ದೇಶಕ್ಕಾಗಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡವರು. ದೇಶಕ್ಕೆ ಅವರದ್ದೇ ಆದ ಕೊಡುಗೆಗಳಿವೆ. ಹಾಗಿರುವಾಗ ಏಕಾಏಕಿ ಇಂತಹ ಕ್ರಮ ಸರಿಯಲ್ಲ ಎಂದರು.
ನಮ್ಮ ರಾಜ್ಯದಲ್ಲಿ ಮಂತ್ರಿಯಾಗಿದ್ದವರು ಇಲ್ಲಿ ಯಾವ ರೀತಿ ಪದಗಳನ್ನು ಬಳಸಿದ್ದಾರೆ. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಯಾವ ರೀತಿ ಕೊಂದರು ಅದೇ ರೀತಿ ಸಿದ್ದರಾಮಯ್ಯನವರನ್ನು ಕೊಲ್ಲಬೇಕು ಎಂದು ಹೇಳಿರುವ ಸಚಿವರಿದ್ದಾರೆ. ಆ ಸಚಿವರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದರೆ ರಾಹುಲ್ ಗಾಂಧಿ ನೀಡಿದ ಒಂದು ಹೇಳಿಕೆಗೆ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿರುವುದು ಎಷ್ಟು ಸರಿ ?ಎಂದು ವಾಗ್ದಾಳಿ ನಡೆಸಿದರು.