ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ, ಇಂದು ಬೆಳಿಗ್ಗೆ ಕರ್ನಾಟಕದ ಗಡಿ ಪ್ರವೇಶಿಸಿದ್ದು ತಮಿಳುನಾಡಿನಿಂದ ಬಂಡಿಪುರ ಅರಣ್ಯ ಪ್ರದೇಶದ ಮೂಲಕ ಆಗಮಿಸಿದ ಇವರುಗಳನ್ನು ರಾಜ್ಯ ಕಾಂಗ್ರೆಸ್ ನಾಯಕರು ಬರಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಅವರ ತಂಡವನ್ನು ಸ್ವಾಗತಿಸುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಯಮ ಉಲ್ಲಂಘಿಸಿರುವ ಘಟನೆ ನಡೆದಿದೆ. ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಕಾರಣ ಪಾದಯಾತ್ರೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿತ್ತು.
ಹೀಗಾಗಿ ರಾಹುಲ್ ಗಾಂಧಿ ಮತ್ತವರ ತಂಡ ವಾಹನದ ಮೂಲಕ ತಮಿಳುನಾಡಿನ ಗುಡಲೂರಿನಿಂದ ಗುಂಡ್ಲುಪೇಟೆಗೆ ಆಗಮಿಸುತ್ತಿತ್ತು. ಈ ವೇಳೆ ಸಿದ್ದರಾಮಯ್ಯನವರು ಅರಣ್ಯದಲ್ಲಿಯೇ ಕಾರು ನಿಲ್ಲಿಸಿ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದಾರೆ.
ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಕಾರಣ ಇಲ್ಲಿ ವಾಹನಗಳನ್ನು ನಿಲ್ಲಿಸಬಾರದೆಂಬ ನಿಯಮವಿದೆ. ಆದರೆ ಸಿದ್ದರಾಮಯ್ಯನವರು ಇದನ್ನು ಉಲ್ಲಂಘಿಸಿದ್ದು ಬಳಿಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಗುಂಡ್ಲುಪೇಟೆಗೆ ಬಂದಿದ್ದಾರೆ.