ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಹೊಸ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕಲು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಅವರು ಈಗಾಗಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಸೇರಿದಂತೆ ಹಲವರನ್ನು ಭೇಟಿಯಾಗಿದ್ದಾರೆ.
ಕರ್ನಾಟಕಕ್ಕೂ ಆಗಮಿಸಿದ್ದ ಚಂದ್ರಶೇಖರರಾವ್, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಮೂರು ದಿನಗಳ ಹಿಂದೆ ಹೈದರಾಬಾದಿಗೆ ತೆರಳಿದ್ದ ಕುಮಾರಸ್ವಾಮಿ, ಕೆಸಿಆರ್ ಅವರನ್ನು ಭೇಟಿಯಾಗಿದ್ದರು.
ಹೀಗಾಗಿ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇದೀಗ ಅದಕ್ಕೆ ಸ್ಪಷ್ಟನೆ ನೀಡಿರುವ ಅವರು, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಅನಿವಾರ್ಯತೆ ನನಗಿಲ್ಲ. ಮೊದಲು ಕರ್ನಾಟಕವನ್ನು ಸರಿ ಮಾಡಿಕೊಳ್ಳಬೇಕಿದೆ. ಜೊತೆಗೆ ದೇಶದ ಬಗ್ಗೆಯೂ ಗಮನಹರಿಸಬೇಕು. ಹೀಗಾಗಿ ಸಮಾನ ಮನಸ್ಕರು ದೇಶದ ಹಿತದೃಷ್ಟಿಯಿಂದ ಒಟ್ಟಾಗಿ ಸೇರಿದ್ದೇವೆ. ಹಾಗೆಂದ ಮಾತ್ರಕ್ಕೆ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದಲ್ಲ ಎಂದು ಹೇಳಿದ್ದಾರೆ.