ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಕಣಕ್ಕಿಳಿದಿದ್ದು, ಶುಕ್ರವಾರದಂದು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತಿತರರ ಸಮ್ಮುಖದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಪ್ರತಿಪಕ್ಷಗಳು ಯಶವಂತ್ ಸಿನ್ಹಾ ಅವರನ್ನು ತಮ್ಮ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಆದರೆ ಈಗಲೇ ಪ್ರತಿಪಕ್ಷಗಳಲ್ಲಿ ಒಡಕು ಮೂಡಿದೆ. ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಪಕ್ಷ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಕುರಿತಂತೆ ನಡೆಸಿದ ಸಭೆಯಲ್ಲಿ ನಮಗೆ ಆಹ್ವಾನವಿರಲಿಲ್ಲ. ಹಾಗೆಂದು ನಾವು ಬಿಜೆಪಿ ಅಥವಾ ಎನ್.ಡಿ.ಎ. ಮೈತ್ರಿಕೂಟದ ಜೊತೆ ಸೇರಿಕೊಂಡಿಲ್ಲ. ಆದರೆ ಆದಿವಾಸಿ ಜನಾಂಗದ ದ್ರೌಪದಿಯವರು ದೇಶದ ಪ್ರಥಮ ಪ್ರಜೆ ಆಗಬೇಕೆಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.