ಬೆಂಗಳೂರು: ನಾನು ದೇಶಭಕ್ತ, ರಾಷ್ಟ್ರಧ್ವಜದ ಬಗ್ಗೆ ಅಪಾರ ಗೌರವಿದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ದೇಶಭಕ್ತಿಯೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿ ರಾಷ್ಟ್ರಧ್ವಜಕ್ಕೆ ಈಶ್ವರಪ್ಪ ಅಪಮಾನ ಮಾಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ದೇಶ ಭಕ್ತಿಯೇ ? ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಏನಂತ ಪ್ರಮಾಣ ಮಾಡಿದರು ? ಇಂತಹ ಸಚಿವರು ಕ್ಯಾಬಿನೆಟ್ ಗೆ ಬೇಕಾ ? ಸಿಎಂ ಬಸವರಾಜ್ ಬೊಮ್ಮಾಯಿಗೆ ಜವಾಬ್ದಾರಿ ಬೇಡವೇ ? ಆಡಳಿತ ಪಕ್ಷಕ್ಕಿಂತ ನಮಗೆ ಹೆಚ್ಚು ಜವಾಬ್ದಾರಿ ಇದೆ ಎಂದು ಕಿಡಿಕಾರಿದ್ದಾರೆ.
ಆಂಗ್ಲ ಭಾಷೆಯಲ್ಲಿ ಉದ್ಯೋಗ ಸೂಚನೆ ನೀಡಿದ ಕೇಂದ್ರ; ಅಮೆರಿಕಾದ ಹುದ್ದೆಗೆ ಅರ್ಜಿ ಸಲ್ಲಿಸಿ ಎಂದು ವ್ಯಂಗ್ಯವಾಡಿದ ತಮಿಳಿಗ…!
ಬಿಜೆಪಿ ನಾಯಕರು ಮೊದಲಿನಿಂದಲೂ ರಾಷ್ಟ್ರಧ್ವಜಕ್ಕೆ ಗೌರವ ನೀಡುವವರಲ್ಲ, ರಾಷ್ಟ್ರಧ್ವಜದಿಂದ ಅವರಾರೂ ಪ್ರೇರಣೆಯಾದವರೂ ಅಲ್ಲ. ಅವರ ಮನಃಸ್ಥಿತಿ ರಾಷ್ಟ್ರಧ್ವಜಕ್ಕೆ ವಿರುದ್ಧವಾದದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಹಿಜಾಬ್ ವಿವಾದ ವಿಚಾರವಾಗಿಯೂ ಮಾತನಾಡಿದ ಸಿದ್ದರಾಮಯ್ಯ, ಸಿಂಧೂರ, ಹಿಜಾಬ್ ಹಾಕುವುದರಿಂದ ಏನು ತೊಂದರೆ ? ಹಿಜಾಬ್ ಹಲವು ವರ್ಷಗಳಿಂದ ಹಾಕಿಕೊಂಡು ಬರುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಅವರ ಧರ್ಮ ಅವರಿಗೆ, ನಮ್ಮ ಧರ್ಮ ನಮಗೆ. ರಾಜಕಾರಣಕ್ಕಾಗಿ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳಿಸಲು ಯತ್ನ ನಡೆದಿದೆ. ಇಂತಹ ನಡೆ ಸರಿಯಲ್ಲ ಎಂದು ಹೇಳಿದರು.