ಬೆಂಗಳೂರು: ಪಠ್ಯ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯವನ್ನೆ ಮುಂದುವರೆಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಇದೀಗ ಪಾದಯಾತ್ರೆಗೆ ಸಜ್ಜಾಗಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಕುವೆಂಪು ಅವರಿಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ತೀರ್ಥಹಳ್ಳಿಯಿಂದ ಕುಪ್ಪಳ್ಳಿವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಜೂನ್ 15ರಂದು ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಕುಪ್ಪಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ಕುವೆಂಪು ಹುಟ್ಟೂರಿನಿಂದಲೇ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗಿದೆ.
ಮತ್ತೊಂದೆಡೆ ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ ಹಿನ್ನೆಲೆಯಲ್ಲಿ ಬಸವಕಲ್ಯಾಣದಿಂದಲೂ ಹೋರಾಟಕ್ಕೆ ಯೋಜನೆ ರೂಪಿಸಿರುವ ಕಾಂಗ್ರೆಸ್ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಪಾದಯಾತ್ರೆಗೆ ಸಿದ್ಧತೆ ನಡೆಸಿದೆ.