ಬೆಂಗಳೂರು: ಪಿ ಎಸ್ ಐ ನೇಮಕಾತಿ ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪಿ ಎಸ್ ಐ ನೇಮಕಾತಿ ಅಕ್ರಮದಲ್ಲಿ ಬಂಧಿತ ಮೂವರು ಅಭ್ಯರ್ಥಿಗಳು ಮಾಗಡಿಯವರು. ಅವರು ನನಗೂ ಕೂಡ ಪರಿಚಯದವರೇ. ಒಳ್ಳೆಯವರು. ಅಂಗಡಿ ಓಪನ್ ಮಾಡಿದ್ದಕ್ಕೆ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದರು.
ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸರು ಹಾಗೂ ಮಕ್ಕಳಿಗೆ ಸಾಲ ಕೊಟ್ಟವರ ವಿವರಗಳು ಹೊರಬರಬೇಕು. ಇದು ಕೇವಲ ಮಾಗಡಿ, ಮಲ್ಲೇಶ್ವರಂಗೆ ಸಂಬಂಧಿಸಿದ್ದಲ್ಲ. ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು, ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿಯೂ ಅಕ್ರಮವಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿ ಯಾರು? ಹಣ ಪಡೆದವರು ಯಾರು ಎಂಬುದು ಸಂಪೂರ್ಣ ತನಿಖೆಯಿಂದ ಬಯಲಾಗಬೇಕು ಎಂದು ಒತ್ತಾಯಿಸಿದರು.
ರಾಮನಗರವನ್ನು ಕ್ಲೀನ್ ಮಾಡುತ್ತೇನೆ ಎಂದು ಬಂದವರು ಈಗ ಏನ್ ಕ್ಲೀನ್ ಮಾಡಿದ್ದಾರೆ? ಇದೇನಾ ಅವರು ಮಾಡಿದ್ದು? ಸಚಿವರ ಸಹೋದರರನ್ನು ವಿಚಾರಣೆ ಮಾಡಿದರೆ ಸಚಿವರು ಹೊರಗೆ ಬರ್ತಾರೆ. ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.