ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದೇವೆ. ಈ ಆರೋಪ ಪಟ್ಟಿಗೆ ಪಾಪದ ಪುರಾಣ ಎಂದು ನಾಮಕರಣ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಿಲ್ಲ. ಆಪರೇಷನ್ ಕಮಲದ ಮೂಲಕ ಶಾಸಕರನ್ನು ಕೊಂಡುಕೊಂಡು ಪಾಪದ ಹಣದಲ್ಲಿ ಸರ್ಕಾರ ರಚನೆ ಮಾಡಿ ರಾಜ್ಯಕ್ಕೆ ವಕ್ಕರಿಸಿಕೊಂಡರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಸಂದರ್ಭದಲ್ಲಿ ಎರಡರಿಂದ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದರು. ಬಳಿಕ ಪ್ರಶ್ನೆ ಮಾಡಿದರೆ ಉತ್ತರ ಕೊಡದೇ ಜಾರಿಕೊಂಡರು. ಸಿಎಂ ಬೊಮ್ಮಾಯಿ ಭ್ರಷ್ಟ ಸಿಎಂ ಮಾತ್ರವಲ್ಲ, ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಅದು ಬಸವರಾಜ್ ಬೊಮ್ಮಾಯಿ ಅವರು ಎಂದು ಕಿಡಿಕಾರಿದರು.
15ನೇ ಹಣಕಾಸು ಆಯೋಗದಿಂದ ಅನುದಾನ ಬಂದಿಲ್ಲ. 15,498 ಕೋಟಿ ರೂಪಾಯಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕೇಳಲೂ ಇಲ್ಲ, 3.5 ಲಕ್ಷ ಕೋಟಿ ಕರ್ನಾಟಕದಿಂದ ತೆರಿಗೆ ವಸೂಲಿ ಮಾಡ್ತಾರೆ. ಆದರೆ ನಮಗೆ ಅನುದಾನ ಕೊಡುವುದು ಮಾತ್ರ ಕಡಿಮೆ. ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಲಾಗದಷ್ಟು ದುರ್ಬಲ ಸರ್ಕಾರ ರಾಜ್ಯದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೇಮಕಾತಿಯಲ್ಲಿ ಲಂಚ, ವರ್ಗಾವಣೆಯಲ್ಲಿ ಲಂಚ, ಪ್ರಮೋಷನ್ ನಲ್ಲಿಯೂ ಲಂಚ. ಹೋಟೆಲ್ ಗಳಲ್ಲಿ ಮೆನು ಕಾರ್ಡ್ ಇಟ್ಟ ರೀತಿಯಲ್ಲಿ ಲಂಚ ಪಡೆಯುತ್ತಿದ್ದಾರೆ. ಧ್ವೇಷದ ರಾಜಕಾರಣಕ್ಕೆ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಕೊನೆ ಹಾಡಬೇಕಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.