ನವದೆಹಲಿ: ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸಿಎಂ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವೇ ಕೋವಿಡ್ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದೆ ಎಂದು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಪಂಜಾಬ್ ಸರ್ಕಾರಕ್ಕೆ 400 ರೂಪಾಯಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದನ್ನು ಖಾಸಗಿ ಆಸ್ಪತ್ರೆಗಳಿಗೆ 1060 ರೂ. ನಂತೆ ಅಮರಿಂದರ್ ಸರ್ಕಾರ ಮಾರಾಟ ಮಾಡುತ್ತಿದೆ. ಸರ್ಕಾರ ತನ್ನ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಕಿಡಿಕಾರಿದ್ದು, ಪಂಜಾಬ್ ಸರ್ಕಾರ ಮೊದಲು ವ್ಯಾಕ್ಸಿನ್ ವಿಕೇಂದ್ರೀಕರಣಕ್ಕೆ ಒತ್ತಾಯಿಸಿತ್ತು. ಈಗ ಕೇಂದ್ರೀಕರಿಸಲು ಹೇಳುತ್ತಿದೆ. ಪ್ರತಿ ಡೊಸ್ ಗೆ 400 ರೂ. ನಂತೆ ಸರ್ಕಾರಕ್ಕೆ 1.40 ಲಕ್ಷ ಲಸಿಕೆಯನ್ನು ನೀಡಲಾಗಿದೆ. ಆದರೆ ಆ ಲಸಿಕೆಗಳನ್ನು 20 ಖಾಸಗಿ ಆಸ್ಪತ್ರೆಗಳಿಗೆ ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದು ಹೇಳಿದ್ದಾರೆ.