ಬೆಂಗಳೂರು: ರಾಜ್ಯ ರಾಜ್ಯಗಳ ನಡುವೆ ವಿವಾದಗಳನ್ನು ಸೃಷ್ಟಿಸಿ, ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಡಬಾರದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮರಾಠಿ ನಿಯೋಗ ಭೇಟಿ ಮಾಡುವಂತೆ ಮಹಾ ಸಿಎಂ ಏಕನಾಥ್ ಶಿಂಧೆ ಹೇಳಿಕೆ ವಿಚಾರವಾಗಿ, ಪ್ರತಿಕ್ರಿಯಿಸಿದ ಸಿಎಂ ಬೊಮ್ಮಯಿ, ನಾವು ಎಲ್ಲಾ ಭಾಷಿಕರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತಿದೇವೆ. ನಮ್ಮ ನಿಯೋಗ ಮರಾಠಿ ನಿಯೋಗ ಭೇಟಿ ಮಾಡುವುದು, ಮರಾಠಿಗರು ನಮ್ಮ ನಿಯೋಗ ಭೇಟಿಯಾಗುವುದು ಇದು ಸಹಜ. ಮಹಾರಾಷ್ಟ್ರದಲ್ಲಿ ಕನ್ನಡಿಗರು ದೊಡ್ದ ಸಂಖ್ಯೆಯಲ್ಲಿರುವಾಗ ಅಲ್ಲಿನ ಕನ್ನಡಿಗರ ಹಿತರಕ್ಷಣೆ ನಮ್ಮ ಕರ್ತವ್ಯ. ಹೀಗಾಗಿ ಅನಗತ್ಯ ವಿವಾದಗಳನ್ನು ಹಚ್ಚುವುದು ಬೇಡ ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಹೋರಾಟ, ಏಕಿಕರಣಾಕ್ಕಾಗಿ ಹೋರಾಡಿದ ಅನೇಕ ಕನ್ನಡಿಗರು ಮಹಾರಾಷ್ಟ್ರದಲ್ಲಿ ವಾಸವಾಗಿದ್ದಾರೆ. ಅವರ ದಾಖಲೆಗಳನ್ನು ತರಿಸಿ ಅವರಿಗೆ ಪಿಂಚಣಿ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ. ಇನ್ನು ಝತ್ ತಾಲೂಕಿನಲ್ಲಿ ತೀವ್ರ ಬರಗಾಲದಿಂದಾಗಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿನವರಿಗೆ ಕುಡಿಯುವ ನೀರು ಪೂರೈಸಲಾಗಿದೆ. ಅಲ್ಲಿನ ಗ್ರಾಮ ಪಂಚಾಯತ್ ಗಳು ಝತ್ ತಾಲೂಕನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಸಿದ್ಧವಿದೆ ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹಚ್ಚುವುದನ್ನು ಮಹಾ ಸಿಎಂ ಮಾಡಬಾರದು ಎಂದು ಎಚ್ಚರಿಸಿದರು.